ವಿಶ್ವದ ಅತಿ ಎತ್ತರದ ಎವರೆಸ್ಟ್‌ನಲ್ಲಿ ತುಳುನಾಡಿನ ಧ್ವಜ ಹಾರಿಸಿದ ಉಡುಪಿಯ ಸಿದ್ಧ್ವೀನ್ ಶೆಟ್ಟಿ

ಉಡುಪಿ, ಆ.6: ಸಾಫ್ಟ್‌ವೇರ್ ಕೆಲಸ ಬಿಟ್ಟು ಸುಮಾರು 18000ಕ್ಕೂ ಅಧಿಕ ಕಿ.ಮೀ. ಪ್ರಯಾಣವನ್ನು ತನ್ನ ಬೈಕಿನಲ್ಲಿಯೇ ಏಕಾಂಗಿಯಾಗಿ ಮುಗಿಸಿದ ಉಡುಪಿಯ ಸಿದ್ಧ್ವೀನ್ ಶೆಟ್ಟಿ(28), ತುಳುನಾಡಿನ ಧ್ವಜವನ್ನು ವಿಶ್ವದ ಅತಿ ಎತ್ತರದ ಉಮ್ಲಿಂಗ್ ಲಾ ಮತ್ತು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನ ಮೇಲೆ ಹಾರಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಉಡುಪಿಯ ಸುರೇಶ್ ಕೃಷ್ಣ ಶೆಟ್ಟಿ ಮತ್ತು ಸುಜಯ ಎಸ್ ಶೆಟ್ಟಿ ದಂಪತಿ ಪುತ್ರ ಸಿಧ್ವೀನ್ ಶೆಟ್ಟಿ ಮೇ 6ರಂದು ಉಡುಪಿ ಯಿಂದ ತನ್ನ ಹಿಮಾಲಯನ್ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿ ಭಾರತ, ನೇಪಾಳ ಮತ್ತು ಭೂತಾನ್ ದೇಶವನ್ನು ಸುತ್ತಿದ್ದು, ಭಾರತದ 21 ರಾಜ್ಯಗಳು, 5 ಕೇಂದ್ರಾಡಳಿತ ಪ್ರದೇಶಗಳನ್ನು ತಿರುಗಾಡಿ ಜು.19ರಂದು ಉಡುಪಿಗೆ ವಾಪಾಸಾಗಿದ್ದಾರೆ. ಇದರೊಂದಿಗೆ ವಿಶ್ವದ ಅತೀ ಎತ್ತರ(19,024ಅಡಿ)ದ ಪ್ರದೇಶವಾದ ಉಮ್ಲಿಂಗ್ ಲಾ, ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್(17598 ಅಡಿ) ಮತ್ತು ವಿಶ್ವದ ಅತೀ ಎತ್ತರದ ಶಿವ ದೇವಾಲಯ ತುಂಗನಾಥ್ ಅನ್ನು ಕೂಡ ಸ್ಪರ್ಶಿಸಿ ಬಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿದ್ಧ್ವೀನ್ ಶೆಟ್ಟಿ, ನನ್ನ ಬೈಕ್ ಸವಾರಿಯ ಸಮಯದಲ್ಲಿ ಹಲವಾರು ಸೇತುವೆಗಳು, ಭೂಕುಸಿತಗಳು, ಪ್ರವಾಹ ಪ್ರದೇಶಗಳು, ಹೊಳೆಗಳು, ಮಂಜುಗಡ್ಡೆಯ ಪ್ರದೇಶಗಳು, ಮರಳು, ಕಲ್ಲುಗಳು, ಪರ್ವತಗಳು, ದಟ್ಟವಾದ ಕಾಡುಗಳನ್ನು ದಾಟಿ ಮುಂದುವರೆದಿದ್ದೇನೆ. ನನ್ನ ಕ್ರೀಡಾ ಟೀ ಶರ್ಟ್ ನಲ್ಲಿ 50+ ಡಿಗ್ರಿಗಳಿಂದ -16ರವರೆಗೆ ತಾಪಮಾನವನ್ನು ತಡೆದುಕೊಂಡು ಪ್ರಯಾಣಿಸಿದ್ದೇನೆ. ಕೆಲವೊಮ್ಮೆ ದಿನಕ್ಕೆ ಒಂದೇ ಬಾರಿ ಊಟವನ್ನು ಮಾಡುತ್ತಿದ್ದೆ ಎಂದು ಹೇಳಿದರು.
ನನ್ನ ಬೈಕ್ ಪ್ರಯಾಣದಲ್ಲಿ 100ಕ್ಕೂ ಅಧಿಕ ದೇವಸ್ಥಾನಗಳು, ಗುರುದ್ವಾರ, ಚರ್ಚ್ ಮತ್ತು ಮಸೀದಿಗಳ ವಾಸ್ತುಶಿಲ್ಪವನ್ನು ಅನುಭವಿಸುವ ಅವಕಾಶ ದೊರಕಿತು. ಈ ವೇಳೆ ಬಹುತೇಕ ಎಲ್ಲಾ ಧರ್ಮದ ಜನರೊಂದಿಗೆ ಬೆರೆಯುವ ಅವರೊಂದಿಗೆ ಸಂವಾದ ಮಾಡುವುದರೊಂದಿಗೆ ಅವರ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಯಲು ಕೂಡ ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ.







