ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ ಶೇ.100 ಗಣತಿ ನಮೂನೆ ವಿತರಣೆ

ಉಡುಪಿ, ಜು.16: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯಲ್ಲಿ ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್)ಗಳನ್ನು ಮತದಾರರಿಗೆ ವಿತರಿಸುವ ಕಾರ್ಯ ಬುಧವಾರ ಪೂರ್ಣ ಗೊಂಡಿದ್ದು, ಜಿಲ್ಲೆಯ ಶೇ.100ರಷ್ಟು ಮಂದಿಗೂ ನಮೂನೆಯನ್ನು ತಲುಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿತರಿಸಲು ನಿಗದಿಯಾಗಿರುವ ಒಟ್ಟು 10,63,876 ಎನ್ಯೂಮರೇಶನ್ ಫಾರ್ಮ್‌ಗಳಲ್ಲಿ 10,63,876 ಫಾರ್ಮ್ ಗಳನ್ನು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ವಿತರಿಸಿದ್ದಾರೆ. ಇವರಲ್ಲಿ ಫಾರಂ ಭರ್ತಿ ಮಾಡಿದವರ ಪೈಕಿ 4,14,167 ಮಂದಿಯ (ಶೇ.38.93) ಗಣತಿ ನಮೂನೆಯನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 2124 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಬೈಂದೂರಿನಲ್ಲಿ 826, ಉಡುಪಿಯಲ್ಲಿ 274, ಕುಂದಾಪುರದಲ್ಲಿ 417 ಕಾಪುವಲ್ಲಿ 348 ಹಾಗೂ ಕಾರ್ಕಳದಲ್ಲಿ 259 ಮಂದಿ ಮತದಾರರು ಮೃತರಾಗಿದ್ದಾರೆ. ಅದೇ ರೀತಿ 1457 ಮಂದಿ ಮತದಾರರು (ಬೈಂದೂರು 558, ಉಡುಪಿ 209, ಕುಂದಾಪುರ 438), ಕಾಪು 152, ಕಾರ್ಕಳ 100) ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 514 ಮಂದಿ ಮತದಾರರು ಆನ್‌ಲೈನ್ ಮೂಲಕ ಸ್ವದಾಖಲಾತಿಯನ್ನು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.






