ಎಸ್‌ಐಆರ್ : ಉಡುಪಿ ಜಿಲ್ಲೆಯಲ್ಲಿ ಶೇ.70 ದಾಟಿದ ಡಿಜಿಟಲೀಕರಣ ಪ್ರಕ್ರಿಯೆ

ಉಡುಪಿ, ಜು.18: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆದಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯಲ್ಲಿ ಮತದಾರರು ಹಿಂದಿರುಗಿಸಿದ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ಭರದಿಂದ ಸಾಗಿದ್ದು, ಸೋಮವಾರ ಸಂಜೆಯವರೆಗೆ ಒಟ್ಟು ಮತದಾರರ ಪೈಕಿ ಶೇ.70.82 ಮಂದಿಯ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 10,63,876 ಮಂದಿ ಮತದಾರರಿಗೆ ಬಿಎಲ್‌ಒಗಳು ಗಣತಿ ನಮೂನೆ (ಎನ್ಯೂಮರೇಶನ್ ಫಾರ್ಮ್) ಗಳನ್ನು ತಲುಪಿಸಿದ್ದು, ಇವರಲ್ಲಿ 7,53,451 ಮಂದಿಯ ಡಿಜಿಟಲೀಕರಣ ಇಂದು ಸಂಜೆಯವರೆಗೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.
ಜಿಲ್ಲೆಯಲ್ಲಿ ಈವರೆಗೆ 5720 ಮಂದಿ ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಗೊತ್ತಾಗಿದೆ. ಬೈಂದೂರಿನಲ್ಲಿ 1974, ಕುಂದಾಪುರ ದಲ್ಲಿ 982, ಉಡುಪಿಯಲ್ಲಿ 719, ಕಾಪುವಲ್ಲಿ 1014 ಹಾಗೂ ಕಾರ್ಕಳದಲ್ಲಿ 1031 ಮಂದಿ ಮತದಾರರು ಮೃತರಾಗಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ 3920 ಮಂದಿ ಮತದಾರರು (ಬೈಂದೂರು 1449, ಕುಂದಾಪುರ 1241, ಉಡುಪಿ 439, ಕಾಪು 430, ಕಾರ್ಕಳ 361) ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1543 ಮಂದಿ ಮತದಾರರು ಆನ್‌ಲೈನ್ ಮೂಲಕ ಸ್ವದಾಖಲಾತಿ ಯನ್ನು ಮಾಡಿದ್ದಾರೆ. ಇದರಲ್ಲಿ ಅರ್ಧ ದಷ್ಟು ಮಂದಿ (752) ಬೈಂದೂರಿನವರು ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ತಿಳಿಸಿದೆ.
ಎನ್ಯೂಮರೇಷನ್ ನಮೂನೆಗಳನ್ನು ಮನೆಮನೆಗೆ ತೆರಳಿ ಸಂಗ್ರಹಿಸುವ ಪ್ರಕ್ರಿಯೆ ಆಗಸ್ಟ್ 8ರವರೆಗೆ ನಡೆಯಲಿದೆ. ಇದುವರೆಗೆ ನಮೂನೆಗಳನ್ನು ಭರ್ತಿ ಮಾಡದವರು ಕೂಡಲೇ ಭರ್ತಿ ಮಾಡಿ ಸಂಬಂಧಿಸಿದ ಬಿಎಲ್‌ಒಗೆ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ನಮೂನೆಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಅಥವಾ ಗೊಂದಲ ಉಂಟಾದರೆ ನಿಮ್ಮ ಹತ್ತಿರದ ಬಿಎಲ್‌ಒ ಫೆಸಿಲಿಟೇಷನ್ ಕೇಂದ್ರ ಅಥವಾ ವೋಟರ್ ಫೆಸಿಲಿಟೇಷನ್ ಸೆಂಟರ್‌ಗೆ ಭೇಟಿ ನೀಡಿ ಅಲ್ಲಿರುವ ಸಿಬ್ಬಂದಿ ಗಳಿಂದ ನೆರವು, ಮಾರ್ಗದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ.






