ಎಸ್‌ಐಆರ್ | ಉಡುಪಿ ಜಿಲ್ಲೆಯಲ್ಲಿ 97,673 ಮಂದಿಗೆ ನೋಟೀಸು ಜಾರಿ
► 18,371 ಮಂದಿಯ ವಿಚಾರಣೆ ಪೂರ್ಣ ► 65,749 ವಿಚಾರಣೆಗೆ ಬಾಕಿ

ಉಡುಪಿ, ಸೆ.11: ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಮತದಾರರ ನೋಂದಣಿ ಹಾಗೂ ನೋಟೀಸುಗಳ ವಿಲೇವಾರಿಗೆ ಸಂಬಂಧಿಸಿದಂತೆ ಇದುವರೆಗೆ ಜಿಲ್ಲೆಯ 97,673 ಮಂದಿಗೆ ನೋಟೀಸುಗಳನ್ನು ಜಾರಿಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಇವುಗಳಲ್ಲಿ 84,120 ನೋಟೀಸುಗಳನ್ನು ವಿತರಿಸುವ ಮೂಲಕ ಶೇ.86.12ರಷ್ಟು ಸಾಧನೆ ಮಾಡಲಾಗಿದೆ. ಇನ್ನು 13,553 ನೋಟೀಸುಗಳು ವಿತರಣೆಗೆ ಬಾಕಿ ಇವೆ. ವಿತರಿಸಲಾದ ನೋಟೀಸುಗಳಲ್ಲಿ 18,371 ಮಂದಿಯ ವಿಚಾರಣೆಗಳು ಪೂರ್ಣಗೊಂಡಿದ್ದು, 65,749 ನೋಟೀಸುಗಳ ವಿಚಾರಣೆ ಬಾಕಿ ಇವೆ ಎಂದು ಜಿಲ್ಲಾಧಿಕಾರಿಗಳ ಹೇಳಿಕೆ ವಿವರಿಸಿದೆ.
ವಿಚಾರಣೆ ನಡೆಸಲು ಅಕ್ಟೋಬರ್ 12 ಕೊನೆಯ ದಿನವಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಅಕ್ಟೋಬರ್ 22ಕೊನೆಯ ದಿನವಾಗಿದ್ದು, ಅಕ್ಟೋಬರ್ 27ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ಜಿಲ್ಲೆಯಲ್ಲಿ ಒಟ್ಟು 10,00,754 ಮತದಾರರಿದ್ದು, ಇವರಲ್ಲಿ 4,84,236 ಪುರುಷರು, 5,16,509 ಮಹಿಳೆಯರು, 9 ತೃತೀಯ ಲಿಂಗಿಗಳಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 1,244 ಮತದಾನ ಕೇಂದ್ರಗಳಿವೆ.
44,841 ಅರ್ಜಿ ಸ್ವೀಕೃತ: ನಮೂನೆ 6, 6ಎ, 7 ಮತ್ತು 8ರಲ್ಲಿ ಒಟ್ಟು 44,841 ಅರ್ಜಿಗಳನ್ನು ಜಿಲ್ಲೆಯಲ್ಲಿ ಸ್ವೀಕರಿಸ ಲಾಗಿದೆ. ಇದರಲ್ಲಿ ನಮೂನೆ 6 (ಹೊಸ ಮತದಾರರ ಸೇರ್ಪಡೆ)ಗೆ 10,231 ಅರ್ಜಿಗಳು, ನಮೂನೆ 6ಎ (ಅನಿವಾಸಿ ಭಾರತೀಯರು)ಗೆ 321 ಅರ್ಜಿಗಳು, ನಮೂನೆ 7 (ಆಕ್ಷೇಪಣೆ ಹೆಸರು ತೆಗೆದು ಹಾಕುವುದು)ಗೆ 744 ಅರ್ಜಿಗಳು ಹಾಗೂ ನಮೂನೆ 8 (ವಿವಿಧ ತಿದ್ದುಪಡಿ/ಬದಲಿ ಕಾರ್ಡ್/ವಿಕಲಚೇತನರ ಗುರುತಿಸುವಿಕೆ)ಗೆ 33,545 ಅರ್ಜಿಗಳು ಸೇರಿವೆ.
ಅರ್ಹ ನಾಗರಿಕರೆಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು, ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳಲ್ಲಿ ಎರಡನೇ ಹಂತದ ವಿಶೇಷ ಅಭಿಯಾನವನ್ನು ಸೆ.19(ಶನಿವಾರ) ಮತ್ತು 20( ರವಿವಾರ) ದಂದು ಹಮ್ಮಿಕೊಳ್ಳಲಾಗಿದೆ. ಇದೇ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣ ಗೊಳ್ಳುವ ಎಲ್ಲಾ ಯುವಕ-ಯುವತಿಯರು ಇಲ್ಲಿ ಅರ್ಜಿ ಸಲ್ಲಿಸಬಹುದು.
ಎನ್‌ಆರ್‌ಐಗೆ ವಿಶೇಷ ರಿಯಾಯಿತಿ: ಹಿರಿಯ ನಾಗರಿಕರು, ವಿಕಲ ಚೇತನರು, ಅನಾರೋಗ್ಯಪೀಡಿತರು ಹಾಗೂ ಅನಿವಾಸಿ ಭಾರತೀಯರ (ಎನ್‌ಆರ್‌ಐ) ಪರವಾಗಿ ಅವರ ಕುಟುಂಬದ ಪ್ರೌಢ ಸದಸ್ಯರೊಬ್ಬರು ಸಂಬಂಧಪಟ್ಟ ಇಆರ್‌ಒ/ಎಇಆರ್‌ಒ ಕಚೇರಿಗೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳು/ಮಾಹಿತಿಯನ್ನು ಸಲ್ಲಿಸಿ ನೋಟೀಸ್ ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ.
ಮತದಾನ ಕೇಂದ್ರಗಳ ಪುನರಚನೆ ಹಾಗೂ ಸರಣಿ ಸಂಖ್ಯೆಗಳ ಬದಲಾವಣೆ ಯಿಂದಾಗಿ, ಕೆಲ ಮತದಾರರ ಭಾಗದ (ಪಾರ್ಟ್ ನಂಬರ್) ಅಥವಾ ಕ್ರಮ ಸಂಖ್ಯೆ (ಸೀರಿಯಲ್ ನಂಬರ್) ಬದಲಾಗಿರುವ ಸಾಧ್ಯತೆ ಇದ್ದು, ಹಳೆಯ ಭಾಗದ ಸಂಖ್ಯೆಯಲ್ಲಿ ಹೆಸರು ಸಿಗದ ಮತದಾರರು ತಮ್ಮ ಎಪಿಕ್ ಸಂಖ್ಯೆಯನ್ನು ಬಳಸಿ -voters.eci.gov.in- ವೆಬ್‌ಸೈಟ್ ಅಥವಾ ECINET ಮೊಬೈಲ್ ಆ್ಯಪ್ ಮೂಲಕ ತಮ್ಮ ಹೆಸರನ್ನು ಹುಡುಕಬಹುದು.
ಅರ್ಜಿಗಳನ್ನು ಆನ್‌ಲೈನ್ ಮೂಲಕವೂ ಸಲ್ಲಿಸಬಹುದು. ಇದಕ್ಕಾಗಿ ಮೇಲಿನ ವೆಬ್‌ಸೈಟ್ ಹಾಗೂ ಆ್ಯಪ್‌ಗಳನ್ನು ಬಳಸಿ ಅಗತ್ಯ ಸ್ವಯಂ- ದೃಢೀಕರಿಸಿದ ದಾಖಲೆಗಳೊಂದಿಗೆ (ವಯಸ್ಸು ಮತ್ತು ವಿಳಾಸದ ಪುರಾವೆ) ಅರ್ಜಿ ಸಲ್ಲಿಸಬಹುದು. ಅಥವಾ ಭರ್ತಿ ಮಾಡಿದ ನಮೂನೆ 6 ಮತ್ತು ಘೋಷಣಾ ಪತ್ರವನ್ನು ಅಗತ್ಯ ದಾಖಲೆಗಳೊಂದಿಗೆ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಅಥವಾ ಇಆರ್‌ಒ ಕಚೇರಿಗೆ ಸಲ್ಲಿಸಬಹುದು.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ:1950 /1800 4255 1950ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.






