ಎಸ್ಐಆರ್ : ಜನಜಾಗೃತಿಗೆ ಎಸ್ ವೈ ಎಸ್ ಕರೆ

ಉಡುಪಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಹೆಸರಲ್ಲಿ ಕೋಟ್ಯಂತರ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾದುದು ಅತ್ಯಂತ ಆಘಾತಕಾರಿ, ಜೂನ್ ಕೊನೆಯಲ್ಲಿ ಕರ್ನಾಟಕದಲ್ಲೂ ಎಸ್ಐಆರ್ ಆರಂಭವಾಗಲಿದ್ದು, ಅರ್ಹ ಮತದಾರರು ಕೈ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಈ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ಕರೆ ನೀಡಿದೆ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಮತದಾನದ ಹಕ್ಕು ಕಳಕೊಂಡವರನ್ನು ಸರ್ಕಾರದ ಉಚಿತ ಸೌಲಭ್ಯಗಳಿಂದಲೂ ಕೈ ಬಿಡಲಾಗುತ್ತಿದೆ. ಇದು ಬಡಜನರ ಬದುಕನ್ನೇ ತಿವಿಯುವುದರಿಂದ ಪ್ರತಿಯೊಬ್ಬರೂ ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಟ್ಟು ಪರಿಷ್ಕರಣೆ ವೇಳೆ ಪಟ್ಟಿಯಿಂದ ಹೊರಬೀಳದಂತೆ ಎಚ್ಚರಿಕೆ ವಹಿಸುವುದಕ್ಕಾಗಿ ಪ್ರತಿ ಊರಿನಲ್ಲೂ ಹೆಲ್ಪ್ ಡೆಸ್ಕ್ ತೆರೆಯಬೇಕು ಎಂದು ಎಸ್ ವೈ ಎಸ್ ಅಭಿಪ್ರಾಯ ಪಟ್ಟಿದೆ.
ಉಡುಪಿಯ ಮಣಿಪಾಲ್ ಇನ್ ಸಭಾಂಗಣದಲ್ಲಿ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಕ್ ಠರಾವು ಮಂಡಿಸಿದರು.
ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಉಪಾಧ್ಯಕ್ಷ ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ತಂಙಳ್ ಎರುಮಾಡ್ ಪ್ರಾರ್ಥನೆ ನಡೆಸಿದರು. ಕೇರಳ ರಾಜ್ಯ ಕಾರ್ಯದರ್ಶಿ ಅಬ್ದುರ್ರಶೀದ್ ನರಿಕ್ಕೋಡ್ ಉಪನ್ಯಾಸ ನೀಡಿದರು.
ಮಾಜಿ ರಾಜ್ಯಾಧ್ಯಕ್ಷ ಎಮ್ ವೈ ಅಬ್ದುಲ್ ಹಫೀಳ್ ಸಅದಿ ಕೊಡಗು ಮಾತನಾಡಿದರು.
ಸಯ್ಯಿದ್ ಶಾಫಿ ನಯೀಮಿ ತಂಙಳ್ ಹಾಸನ, ಅಬೂಬಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ, ಅಡ್ವೊಕೇಟ್ ಹಂಝತ್ ಉಡುಪಿ, ಹಸೈನಾರ್ ಸಕಲೇಶಪುರ, ಅಶ್ಅರಿಯಾ ಸಖಾಫಿ, ಆಸಿಫ್ ಕೃಷ್ಣಾಪುರ, ಶಾಹುಲ್ ಹಮೀದ್ ಮದದಿ ಶಿವಮೊಗ್ಗ, ಹಂಝ ಮದನಿ ಕಾಂತಿಜಾಲ್, ಅಬ್ದುಲ್ ಲತೀಫ್ ಫಾಳಿಲಿ ನಾವುಂದ, ಅಡ್ವಕೇಟ್ ಇಲ್ಯಾಸ್ ನಾವುಂದ ಮತ್ತಿತರರು ಉಪಸ್ಥಿತರಿದ್ದರು.
ಮನ್ಸೂರ್ ಅಲಿ ಕೋಟೆಗದ್ದೆ ಸ್ವಾಗತಿಸಿ, ಖಲೀಲ್ ಮಾಲಿಕಿ ಧನ್ಯವಾದವಿತ್ತರು. ಕೆ ಎ ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು.






