ಸಿದ್ದಾಪುರ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಧರಣಿ

ಕುಂದಾಪುರ, ಆ.23: ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಸಿದ್ದಾಪುರ ಘಟಕದ ನೇತೃತ್ವದಲ್ಲಿ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರ ಮೇಲ್ದರ್ಜೆಗೆ ಏರಿಸಲು ಆಗ್ರಹಿಸಿ ಮೆರವಣಿಗೆ ಹಾಗೂ ಧರಣಿಯನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಟ್ಟಡ ಹಾಗೂ ಗೇರು ಬೀಜ ಕಾರ್ಖಾನೆ ಕಾರ್ಮಿಕರು ಹಾಗೂ ಗ್ರಾಮಸ್ಥರು ಸಿದ್ದಾಪುರ ಪೇಟೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಮೆರವಣಿಗೆ ನಡೆಸಿ ಆರೋಗ್ಯ ಕೇಂದ್ರದ ಎದುರುಗಡೆ ಧರಣಿ ನಡೆಸಿದರು. ಧರಣಿಯನ್ನು ದ್ದೇಶಿಸಿ ಮಾತ ನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿದ್ದಾಪುರ ಜನತೆಗೆ ಮೂಲಭೂತ ಸೌಕರ್ಯ ವಾಗಿರುವ ಆರೋಗ್ಯ ಸೇವೆಯನ್ನು ಸರಕಾರ ನಿರಂತರವಾಗಿ ಕಡೆಗಣಿಸಿದೆ. ಸುತ್ತಮುತ್ತಲಿನ ಗ್ರಾಮಗಳ ನೂರಾರು ರೋಗಿಗಳು ಕೇಂದ್ರಕ್ಕೆ ಬರುತ್ತಿದ್ದು, ವೈದ್ಯರು ವಾರದ ಕೆಲವೇ ದಿನಗಳು ಮಾತ್ರ ಲಭ್ಯ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸಂಜೆ 4.30 ಗಂಟೆಗೆ ಕೇಂದ್ರ ಮುಚ್ಚುವುದರಿಂದ ರಾತ್ರಿ ಹೊತ್ತು ತುರ್ತು ಚಿಕಿತ್ಸೆ ಸಿಗದೆ ಗ್ರಾಮಸ್ಥರು ದೂರದ 30 ಕಿಮೀ ಕುಂದಾಪುರಕ್ಕೆ ಹೋಗುವ ಸ್ಥಿತಿ ಉಂಟಾಗುತ್ತಿದೆ ಎಂದು ದೂರಿದರು.
ಸುಮಾರು 4 ಎಕರೆಗೂ ಅಧಿಕ ವಿಸ್ತಾರ ಜಾಗದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್, ಶವಾಗಾರ, ಬೆಡ್, ಶೌಚಾಲಯ ವ್ಯವಸ್ಥೆ ಕಟ್ಟಡ ಇದ್ದರೂ ಸಿಬ್ಬಂದಿ ನೇಮಕ ಮಾಡದೇ ಗ್ರಾಮಸ್ಥರಿಗೆ ಸಿಗಬೇಕಾದ ಸೌಲಭ್ಯದಿಂದ ವಂಚಿಸಲಾಗುತ್ತಿದೆ. ಆದುದರಿಂದ ಸರಕಾರ ಕೂಡಲೇ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ಸಿದ್ದಾಪುರ ಮತ್ತು ಸುತ್ತಮುತ್ತಲಿನ ಜನರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾ ಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ., ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಮಾತನಾಡಿದರು. ಈ ಕುರಿತ ಮನವಿಯನ್ನು ಆರೋಗ್ಯ ಕೇಂದ್ರದ ಶಾಂತಪ್ಪಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಸಿಐಟಿಯು ಜಿಲ್ಲಾ ಮುಖಂಡ ಮಹಾಬಲ ವಡೇರಹೋಬಳಿ, ಕೆಲಸಗಾರರ ಸಂಘದ ಗಿರಿಜ ಆಚಾರ್, ಗಿರೀಜ ಶೆಡ್ತಿ, ಶಾರದ, ವೆಂಕಟೇಶ್ ಹೊಸಂಗಡಿ, ರತ್ನಾಕರ ಸಿದ್ದಾಪುರ, ವಿಠಲ, ಕೃಷ್ಣ ಪೂಜಾರಿ, ಜ್ಯೋತಿ, ಚಂದ್ರ ಕುಲಾಲ್ ಮೂಡುಬಗೆ ಮೊದಲಾದವರು ಉಪಸ್ಥಿತರಿದ್ದರು.
ಕಟ್ಟಡ ಕಾರ್ಮಿಕರ ಸಂಘದ ಸಿದ್ದಾಪುರ ಘಟಕದ ಕಾರ್ಯದರ್ಶಿ ಪಿ.ಟಿ. ಅಲೆಕ್ಸಾಂಡರ್ ಸ್ವಾಗತಿಸಿದರು. ಕಟ್ಟಡ ಕಾರ್ಮಿಕರ ಸಿದ್ದಾಪುರ ಅಧ್ಯಕ್ಷ ರಾಘವೇಂದ್ರ ಆಚಾರ್ಯ ವಂದಿಸಿದರು.







