ಅನಾಮಿಕ ದೂರುದಾರನ ತನಿಖೆಯನ್ನು ಎಸ್‌ಐಟಿ ನಿರ್ಧರಿಸುತ್ತೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಉಡುಪಿ, ಆ.23: ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕ ದೂರುದಾರನ ಬಂಧನವಾಗಿರುವುದು ನಿಜ. ಆತ ಈಗ ಎಸ್‌ಐಟಿ ಕಸ್ಟಡಿಯಲ್ಲಿದ್ದಾನೆ. ಅನಾಮಿಕ ದೂರುದಾರನ ಮುಂದಿನ ತನಿಖೆಯನ್ನು ಎಸ್‌ಐಟಿ ನಿರ್ಧರಿಸಲಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ರಾಜ್ಯ ಮಟ್ಟದ ಕಿರಿಯರ ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸಿದ ಡಾ.ಪರಮೇಶ್ವರ್, ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ತನಿಖೆ ಈಗಾಗಲೇ ನಡೆಯುತ್ತಿರುವುದರಿಂದ ಯಾವುದೇ ಮಾಹಿತಿ ನೀಡಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಎಸ್‌ಐಟಿಯವರು ಆತನನ್ನು ಬಂಧಿಸಿದ್ದಾರೆ. ಬಂಧನದ ಕುರಿತಂತೆ ಎಸ್‌ಐಟಿಯವರೇ ಹೆಚ್ಚಿನ ಮಾಹಿತಿ ನೀಡು ತ್ತಾರೆ ಎಂದು ಪದೇ ಪದೇ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಎಸ್‌ಐಟಿ ತನಿಖೆ ನಡೆಯುತ್ತಿದೆ. ಅದು ಪೂರ್ಣಗೊಳ್ಳುವವರೆಗೆ ನಮಗೆ ಯಾವುದೇ ವಿಚಾರಗಳನ್ನು ಹಂಚಿಕೊಳ್ಳಲು ಸಾದ್ಯವಿಲ್ಲ. ಯಾವುದೇ ತೀರ್ಮಾನಕ್ಕೆ ಬರಲೂ ಸಾಧ್ಯವಿಲ್ಲ. ಪ್ರಕರಣದ ಹಿಂದೆ ದೊಡ್ಡ ಜಾಲ ಇದ್ದರೆ ಅದು ತನಿಖೆ ಯಾಗಿ ಪತ್ತೆಯಾಗಬೇಕಿದೆ. ತನಿಖೆ ಮುಗಿದ ಮೇಲೆಯೇ ಈ ಬಗ್ಗೆ ಗೊತ್ತಾಗಬೇಕಿದೆ. ಅದುವರೆಗೆ ಎಲ್ಲಾ ರೀತಿಯ ಊಹಾಪೋಹಗಳು ಇರುತ್ತಾವೆ ಎಂದರು.
ಅನಾಮಿಕನ ಬಂಧನದಿಂದ ಎಸ್‌ಐಟಿ ತನಿಖೆಗೆ ಮುಕ್ತಾಯ ಹೇಳಲಾಗುವುದೇ ಎಂದು ಪ್ರಶ್ನಿಸಿದಾಗ, ಅದನ್ನು ಈಗಲೇ ಹೇಳಲು ಬರುವುದಿಲ್ಲ. ಸುಜಾತ ಭಟ್ ಅವರ ಹೇಳಿಕೆಯೂ ಎಸ್‌ಐಟಿ ತನಿಖೆಯಲ್ಲಿ ಒಳಗೊಂಡಿದೆ. ತನಿಖೆ ವರದಿ ಬರುವವರೆಗೂ ಯಾವುದೇ ವಿಷಯವನ್ನು ನಾವು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಏಕೆಂದರೆ ಇದರಿಂದ ಎಸ್‌ಐಟಿ ತನಿಖೆಗೆ ತೊಂದರೆಯಾಗುತ್ತದೆ ಎಂದು ಅವರು, ಸುಜಾತ ಭಟ್ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ ಹೇಳಿದರು. ತನಿಖೆ ಪೂರ್ಣ ಗೊಳ್ಳುವವರೆಗೆ ಯಾವುದೇ ವಿಷಯ ಹೇಳಲು ಸಾಧ್ಯವಿಲ್ಲ ಎಂದರು.
ಬಿಜೆಪಿಯವರ ಆರೋಪದ ಕುರಿತು ಕೇಳಿದಾಗ, ಅವರು ಬಹಳಷ್ಟು ಆರೋಪ ಮಾಡುತ್ತಾ ಇರುತ್ತಾರೆ. ಅನೇಕರು ಅದಕ್ಕೆ ಟೀಕೆಯನ್ನು ಮಾಡುತ್ತಾರೆ. ಅದೇ ರೀತಿ ಬೇರೆಯವರೂ ಸಹ ವಿವಿಧ ರೀತಿಯ ಹೇಳಿಕೆಗಳನ್ನು ನೀಡಿರುವು ದನ್ನು ನೋಡಿದ್ದೇನೆ. ಆದರೆ ಹೇಳಿಕೆ ಆಧಾರದ ಮೇಲೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಎಸ್‌ಐಟಿ ಅಂತಿಮ ವರದಿ ಕೊಡುವವರೆಗೆ ಪ್ರಕರಣದ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದರು.
ಸಿಎಂ ವಿರುದ್ಧ ತಿಮರೋಡಿ ನೀಡಿದರೆಂದು ಹೇಳಿದ ಹೇಳಿಕೆಯನ್ನು ಹರೀಶ್ ಪೂಂಜಾ ನೀಡಿದ್ದು ಎಂದು ಗೊತ್ತಾಗಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ, ಶಾಸಕ ಹರೀಶ್ ಪೂಂಜಾ 2023ರಲ್ಲೇ ಈ ಹೇಳಿಕೆಗೆ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ತಡೆ ಆಜ್ಞೆ ತೆರವಾದರೆ ಕ್ರಮ ತೆಗೆದುಕೊಳ್ಳಬಹುದು ಎಂದು ಉತ್ತರಿಸಿದರು.
ದೂರುದಾರನ ಬಂಧನವಾಗಿರುವುದರಿಂದ ತನಿಖೆ ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತೆ ಎಂದು ಕೇಳಿದಾಗ, ದೂರುದಾರ ನೀಡಿದ ಮಾಹಿತಿ ಆಧಾರದಲ್ಲಿ ತಾನೇ ನಾವು ತನಿಖೆ ಪ್ರಾರಂಭಿಸಿದ್ದು. ಈಗ ದೂರುದಾರನನ್ನೇ ಬಂಧಿಸಿರುವುದರಿಂದ ಎಸ್‌ಐಟಿ ಈವರೆಗೆ ನಡೆಸಿದ ತನಿಖೆ ಆಧಾರದಲ್ಲೇ ಅದು ಮುಂದುವರಿಯುತ್ತದೆ ಎಂದರು.
ದೂರುದಾರನ ಮಂಪರು ಪರೀಕ್ಷೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಪರಮೇಶ್ವರ್, ತನಿಖೆಯನ್ನು ಎಸ್‌ಐಟಿಗೆ ಕೊಟ್ಟ ಬಳಿಕ ಎಸ್‌ಐಟಿ ತನಿಖೆಯನ್ನು ಯಾವ ರೀತಿ ಮಾಡಬೇಕು ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ. ಅದನ್ನು ಎಸ್‌ಐಟಿಗೆ ಬಿಟ್ಟಿದ್ದೇವೆ. ಸತ್ಯವನ್ನು ಹೊರತರಲು ಅವರು ಯಾವ ಕ್ರಮ ಅನುಸರಿಸಬೇಕೋ ಅದನ್ನು ಅವರು ನಿರ್ಧರಿಸುತ್ತಾರೆ ಎಂದರು.







