ಎಸ್.ಎನ್.ಸೇತುರಾಮ್‌ಗೆ ‘ಶಾರದಾಕೃಷ್ಣ ಪ್ರಶಸ್ತಿ’

ಉಡುಪಿ: ಬೆಂಗಳೂರಿನ ಹಿರಿಯ ನಟ, ರಂಗ ನಿರ್ದೇಶಕ, ಕನ್ನಡ ಕಿರುತೆರೆಯ ನಟ ಎಸ್.ಎನ್.ಸೇತುರಾಮ್ ಅವರು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಹೆಬ್ರಿಯ ಶ್ರೀರಾಘವೇಂದ್ರ ಚಾರಿಟೇಬಲ್ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ನೀಡಲಾಗುವ 2026ನೇ ಸಾಲಿನ ‘ಶಾರದಾ ಕೃಷ್ಣ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ತಿಳಿಸಿದ್ದಾರೆ.
ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು 50,000ರೂ.ಗಳ ನಗದು ಸಹಿತ ಪ್ರಶಸ್ತಿ ಪತ್ರ, ಫಲಕದೊಂದಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಮುಂದಿನ ಜನವರಿ ತಿಂಗಳ 24ರಿಂದ 26ರವರೆಗೆ ನಡೆಯಲಿರುವ ಸಂಸ್ಕೃತಿ ಉತ್ಸವದ ಮೊದಲ ದಿನ ಪ್ರದಾನ ಮಾಡಲಾಗುವುದು ಎಂದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ 2024ರಿಂದ ಈ ಪ್ರಶಸ್ತಿಯನ್ನು ನೀಡುತಿದ್ದು, ರಂಗಕರ್ಮಿ ಕಾಸರಗೋಡು ಚಿನ್ನ ಹಾಗೂ ಜೀವನರಾಂ ಸುಳ್ಯ ಅವರು ಈಗಾಗಲೇ ಈ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಸಂಸೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ತಿಳಿಸಿದರು.
72 ವರ್ಷ ವಯಸ್ಸಿನ ಸೇತುರಾಮ್ ಕಳೆದ ಸುಮಾರು 45 ವರ್ಷಗಳಿಂದ ಕರ್ನಾಟಕ ಹವ್ಯಾಸಿ ರಂಗಭೂಮಿಯೊಂದಿಗೆ ವಿವಿಧ ರೀತಿಯಲ್ಲಿ ಸಂಬಂಧ ವನ್ನು ಹೊಂದಿದ್ದಾರೆ. ನಟರಾಗಿ ‘ಯಯಾತಿ’, ‘ಭಾರತೀಪುರ’, ‘ಕೇಳು ಜನಮೇಜಯ’ ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ ಪ್ರಮುಖ ನಿರ್ದೇಶಕರಾದ ಸಿಜಿಕೆ, ಆರ್.ನಾಗೇಶ್‌ಗೆ ಸಹಾಯಕ ನಿರ್ದೇಶಕ ರಾಗಿಯೂ ಕೆಲಸ ಮಾಡಿದ್ದು, ಹಲವು ನಾಟಕಗಳನ್ನು ತಾವೇ ಬರೆದು ನಿರ್ದೇಶಿಸಿದ್ದಾರೆ ಎಂದರು.
ಸೇತುರಾಮ್ ಕಿರುತೆರೆಯ ಜನಪ್ರಿಯ ನಟರಾಗಿದ್ದು, ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟೆಸಿದ್ದು, ಇವರಿಗೆ ನಾಟಕ ಅಕಾಡೆಮಿ ಪುರಸ್ಕಾರವೂ ದೊರೆತಿದೆ. ಇವರ ಸಣ್ಣ ಕಥಾಸಂಕಲನಕ್ಕೆ ‘ಮಾಸ್ತಿ ಕಥಾ ಪುರಸ್ಕಾರ’ ಲಭಿಸಿದೆ ಎಂದು ರವಿರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಉಪಾಧ್ಯಕ್ಷೆ ಡಾ.ಭಾರ್ಗವಿ ಐತಾಳ್, ವಾಸುದೇವ ಅಡಿಗ ಉಪಸ್ಥಿತರಿದ್ದರು.







