ಕರಾವಳಿ ಜಿಲ್ಲೆಗಳ ಸಿಎನ್ಜಿ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ : ಸಂಸದ ಕೋಟ ಲಿಖಿತ ಪ್ರಶ್ನೆಗೆ ಸಚಿವ ಸುರೇಶ್ ಗೋಪಿ ಉತ್ತರ

ಸುರೇಶ್ ಗೋಪಿ, ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಡಿ.9: 2034ರ ವೇಳೆಗೆ, ದೇಶದಾದ್ಯಂತ 18,336 ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಸೆ.30ರವರೆಗೆ ಒಟ್ಟು 8,357 ಸಿಎನ್ಜಿ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಿ ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಕೇಂದ್ರದ ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವ ಚಿತ್ರನಟ ಸುರೇಶ್ ಗೋಪಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ.
2025ರ ಸೆ.30ರವರೆಗೆ ಒಟ್ಟು 5,826 ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸುವ ಗುರಿಗೆ ವಿರುದ್ಧವಾಗಿ 8,357 ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಿಎನ್ಜಿ ಬೇಡಿಕೆ ಮತ್ತು ಈ ನೈಸರ್ಗಿಕ ಅನಿಲದ ಲಭ್ಯತೆಯ ಮೇರೆಗೆ ಹೆಚ್ಚಿನ ಸಿಎನ್ಜಿ ಮಾರಾಟ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈಗಿರುವ ಸಿಎನ್ಜಿ ಮಾರಾಟ ಕೇಂದ್ರಗಳನ್ನು ಆನ್ಲೈನ್ ಸ್ಟೇಶನ್ ಗಳಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸಿಜಿಡಿ (ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟರ್) ಘಟಕಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಲಿವುಡ್ ನಟ ಸುರೇಶ್ ಗೋಪಿ ಹೇಳಿದ್ದಾರೆ.
ಇದರಿಂದ ವಾಹನಗಳಿಗೆ ವೇಗವಾಗಿ ಇಂಧನವನ್ನು ತುಂಬಿಸಲು ಸಹಾಯವಾಗುತ್ತದೆ. ಸಿಎನ್ಜಿ ತಾಂತ್ರಿಕತೆ ತೊಂದರೆ ಮತ್ತು ಗೊಂದಲದ್ದರೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಹ ಆದೇಶ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಿಎನ್ಜಿ ಕೊರತೆ ಮತ್ತು ಸರಬರಾಜಿನ ಸಮಸ್ಯೆಯಿಂದಾಗಿ ಜಿಲ್ಲೆಯ ಬಡ ರಿಕ್ಷಾಚಾಲಕರು ಮತ್ತು ವಾಹನ ಮಾಲಕರು ಕಿ.ಮೀ. ಉದ್ದದ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ಹೆಚ್ಚುವರಿ ಸಿಎನ್ಜಿ ಸರಬರಾಜಿಗೆ ಆಗ್ರಹಿಸಿ ಸಂಸದ ಕೋಟ ಇಲಾಖೆಗೆ ಲಿಖಿತ ಪ್ರಶ್ನೆ ಕೇಳಿದ್ದರು.
ದೇಶದಾದ್ಯಂತ ನೈಸರ್ಗಿಕ ಅನಿಲದ ಲಭ್ಯತೆಯನ್ನು ಹೆಚ್ಚಿಸಲು ಪಿಎನ್ಜಿಆರ್ಬಿ (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ) ಮೂಲಕ ಸುಮಾರು 34,223ಕಿ.ಮೀ. ಉದ್ದದ ನೈಸರ್ಗಿಕ ಪೈಪ್ಲೈನ್ ಅಳವಡಿಕೆ ವ್ಯವಸ್ಥೆಯನ್ನು ರಚಿಸಲು ಮತ್ತು ‘ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್’ ಕಲ್ಪನೆ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ವರ್ಷದಲ್ಲಿ ಕಾರ್ಯಾಚರಣೆಯ ಪೈಪ್ಲೈನ್ 25,429 ಕಿ.ಮೀ ಉದ್ದ ಹಾಗೂ 10,459 ಕಿ.ಮೀ ವ್ಯಾಪ್ತಿಯ ಪೈಪ್ಲೈನ್ಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಇದರೊಂದಿಗೆ ದೇಶದಲ್ಲಿ 6,20,428 ಕಿ.ಮೀ. ಗಾತ್ರದ ಕಿರು ಇಂಚು ಪೈಪ್ಲೈನ್ ಅಳವಡಿಕೆ ಪ್ರಗತಿಯಲ್ಲಿದೆ ಎಂದೂ ಸುರೇಶ್ ಗೋಪಿ ಉತ್ತರದಲ್ಲಿ ವಿವರಿಸಿದ್ದರು.
ಅಲ್ಲದೇ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಸಿಎನ್ಜಿ ನೆಟ್ವರ್ಕ್ ಅಭಿವೃದ್ಧಿಗಾಗಿ ಎಜಿಪಿ ಸಿಟಿ ಗ್ಯಾಸ್ ಪ್ರೈ.ಗೆ ಅಧಿಕಾರ ನೀಡಲಾಗಿದ್ದು, ಸದರಿ ಜಿಲ್ಲೆಗಳಲ್ಲಿ ಪೈಪ್ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಸಲು ದಾಬೋಲ್-ಬೆಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಕಾರ್ಯ ನಿರ್ವಹಿಸುತ್ತಿದೆ. ಎಂಡಬ್ಲ್ಯೂಪಿ (ಕನಿಷ್ಠ ಕಾರ್ಯ ಯೋಜನೆ) ಪ್ರಕಾರ 2029ರ ವೇಳೆಗೆ 121 ಹೆಚ್ಚುವರಿ ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅಲ್ಲದೇ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದೂ ಕೇಂದ್ರ ಸಚಿವರು ಲಿಖಿತ ಉತ್ತರ ದಲ್ಲಿ ತಿಳಿಸಿದ್ದಾರೆ.







