3-4 ದಿನದೊಳಗೆ ಮರಳು, ಲಾರಿ ಮಾಲಕರ ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ 6 ಶಾಸಕರಿಂದ ಡಿಸಿ ಕಚೇರಿ ಎದುರು ಧರಣಿ: ಕೋಟ ಎಚ್ಚರಿಕೆ

ಉಡುಪಿ: ಇನ್ನು 3-4 ದಿನದೊಳಗೆ ಜಿಲ್ಲೆಯ ಜನತೆ ಎದುರಿಸುತ್ತಿರುವ ಮರಳು ಸಮಸ್ಯೆ ಹಾಗೂ ಜಿಲ್ಲೆಯ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರು ಎದುರಿಸುತ್ತಿರುವ ಗೊಂದಲ ಹಾಗೂ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ತಾನೂ ಸೇರಿದಂತೆ ಐದು ಮಂದಿ ಚುನಾಯಿತ ಶಾಸಕರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ ಗಂಟಿಹೊಳೆ ಇವರ ಉಪಸ್ಥಿತಿಯಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಸರಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ ಯಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇರ ಹೊಣೆ ಎಂದರು.
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದೆ. ಮರಳು ಸಿಗುತ್ತಿಲ್ಲ. ಕೆಂಪು ಕಲ್ಲು, ಕೆಂಪು ಮಣ್ಣು, ಶಿಲೆ ಕಲ್ಲು, ಜಲ್ಲಿ, ಕಬ್ಬಿಣ ಸೇರಿದಂತೆ ಇತರ ಕಟ್ಟಡ ಸಾಮಗ್ರಿಗಳ ಸಾಗಾಟಕ್ಕೆ ಪೊಲೀಸರು ತಡೆಯೊಡ್ಡಿ ಕೇಸು ಹಾಕುತಿದ್ದಾರೆ. ದಂಡ ವಿಧಿಸುತಿ ದ್ದಾರೆ. ಇದರಿಂದ ಲಾರಿ, ಟೆಂಪೋ ಮಾಲಕರು ಮುಷ್ಕರ ಆರಂಭಿಸಿದ್ದಾರೆ ಎಂದು ಅವರು ವಿವರಿಸಿದರು.
ಇದರಿಂದ ಜಿಲ್ಲೆಯಲ್ಲಿ ನಿರ್ಮಾಣ ವಲಯ ಅತೀವ ತೊಂದರೆಯನ್ನು ಎದುರಿಸುತ್ತಿದೆ. ರೈತರಿಗೂ ತನ್ನ ಜಾಗದ ಮಣ್ಣು, ಕಲ್ಲು ಸಾಗಿಸುವುದು ಸಮಸ್ಯೆಯಾಗುತ್ತಿದೆ ಎಂದ ಅವರು, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಮಧ್ಯ ಪ್ರವೇಶಿಸಿ ತಕ್ಷಣ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಐವರು ಶಾಸಕರೊಂದಿಗೆ ತಾನು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂರಲಿದ್ದೇವೆ ಎಂದವರು ಎಚ್ಚರಿಕೆ ನೀಡಿದರು.
ಇದ್ದ ಮರಳು ತೆಗೆಯುತ್ತಿಲ್ಲ: ಜಿಲ್ಲೆಯಲ್ಲಿ ಜನರಿಗೆ 7.86 ಲಕ್ಷ ಮೆಟ್ರಿಕ ಟನ್ ಮರಳಿನ ಅಗತ್ಯವಿದೆ ಎಂದು ಪಿಡಬ್ಯುಡಿ ಇಲಾಖೆ ಅಂದಾಜಿಸಿದೆ. ಎನ್‌ಜಿಟಿಯ ಆದೇಶದಿಂದಾಗಿ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್) ಮರಳು ಗಾರಿಕೆ ಮಾಡಲು ಅವಕಾಶ ಇಲ್ಲವಾಗಿದೆ. ಇದನ್ನು ಹೊರತು ಪಡಿಸಿದ ಜಾಗದಲ್ಲಿ ಮರಳುಗಾರಿಕೆಗೆ ಸರಕಾರ ಮುಂದಾಗು ತ್ತಿಲ್ಲ ಎಂದವರು ದೂರಿದರು.
ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ 2 ಹಾಗೂ ಅಂಪಾರಿನಲ್ಲಿ ಒಂದು ಸೇರಿದಂತೆ ಒಟ್ಟು ಮೂರು ಕಡೆ ಮರಳುಗಾರಿ ಕೆಗೆ ಅವಕಾಶವಿದೆ. ಇಲ್ಲಿ ಒಟ್ಟು 96,220 ಮೆಟ್ರಿಕ್ ಟನ್ ಮರಳಿದ್ದು, ಕೇವಲ 8,750 ಮೆಟ್ರಿಕ್ ಟನ್ ಮರಳು ಮಾತ್ರ ತೆಗೆಯಲಾಗಿದೆ. ಎನ್‌ಜಿಟಿಯ ಆದೇಶದಿಂದ ಇಲ್ಲಿ ಮರಳುಗಾರಿಕೆ ನಿಂತಿದೆ ಎಂದರು.
ಜಿಲ್ಲಾ ವ್ಯಾಪ್ತಿಯ ವಲಯ 1,2,3 ಶ್ರೇಣಿಯ ಹಳ್ಳ ತೊರೆಗಳಲ್ಲಿ 77 ಮರಳು ಬ್ಲಾಕ್‌ಗಳಿದ್ದು, ಇವುಗಳಲ್ಲಿ 35 ಬ್ಲಾಕ್‌ಗಳ ಅವಧಿ ಮುಗಿದಿದೆ.ಈ ಬ್ಲಾಕ್‌ಗಳಲ್ಲಿ ಒಟ್ಟು 64,746 ಮೆಟ್ರಿಕ್ ಟನ್ ಮರಳಿದ್ದು, ಕೇವಲ 1,110 ಮೆಟ್ರಿಕ್ ಟನ್ ಮರಳನ್ನು ಮಾತ್ರ ಇಲ್ಲಿ ಈವರೆಗೆ ಹೊರ ತೆಗೆಯಲಾಗಿದೆ ಎಂದು ಕೋಟ ವಿವರಿಸಿದರು.
ಇನ್ನು 42 ಮರಳು ಬ್ಲಾಕ್‌ಗಳ ಅವಧಿ ಈ ವರ್ಷದ ಡಿಸೆಂಬರ್ 15ರವರೆಗೂ ಇದ್ದು, ಇಲ್ಲಿ ಒಟ್ಟು 1,47,058 ಮೆಟ್ರಿಕ್ ಟನ್ ಮರಳಿದೆ. ಇದರಲ್ಲಿ ಟ್ರಿಪ್‌ಶಿಟ್ ಪಡೆದು 4,419 ಮೆಟ್ರಿಕ ಟನ್ ಮರಳನ್ನು ಮಾತ್ರ ಈವರೆಗೆ ಹೊರತೆಗೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 5000ಕ್ಕೂ ಅಧಿಕ ಲಾರಿಗಳ ಮಾಲಕರು ಮರಳುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಸುಮಾರು ಎರಡು ಲಕ್ಷ ಕಾರ್ಮಿಕರು (30,000 ಕುಟುಂಬ) ಮರಳುಗಾರಿಕೆಯ ಮೇಲೆ ಅವಲಂಬಿತ ರಾಗಿದ್ದಾರೆ. ಸರಕಾರದ ಧೋರಣೆಯಿಂದ ಇವರೆಲ್ಲರೂ ಈಗ ಬೀದಿಗೆ ಬಿದ್ದಿದ್ದಾರೆ ಎಂದು ಕೋಟ ಆರೋಪಿಸಿದರು.







