ನಾಟಕಗಳಿಂದ ಸಾಮಾಜಿಕ ಸಮಸ್ಯೆ ಪರಿಹಾರ: ಡಾ.ವಿಜಯ ಬಲ್ಲಾಳ್

ಉಡುಪಿ, ಜ.2: ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಸಮಾಜದ ವಿವಿಧ ಮುಖಗಳ ಅನಾವರಣೆ, ಸಾಮಾಜಿಕ ಪಿಡುಗುಗಳ ಬಗ್ಗೆ ನಾಟಕಗಳು ಬೆಳಕು ಚೆಲ್ಲಿ ಸಮಸ್ಯೆಗಳ ಪರಿಹಾರಕ್ಕೂ ಕಾರಣವಾಗಿವೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.
ರಂಗಭೂಮಿ ಉಡುಪಿ ವತಿಯಿಂದ ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ದಿ.ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಗುರುವಾರ ನಡೆದ ಎರಡು ದಿನಗಳ ’ಅಂಬಲಪಾಡಿ ನಾಟಕೋತ್ಸವ ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಕ್ಕಳಿಗೆ ನಾಟಕ ಕಲಿಸಬೇಕು. ರಂಗಭೂಮಿಯ ಪರಿಚಯ ಮಾಡಿ ಕೊಡಬೇಕು. ಅವರಲ್ಲಿ ಸುಪ್ತವಾಗಿ ಅಡಗಿರುವ ರಂಗಪ್ರತಿಭೆಯನ್ನು ಹೊರತರಬೇಕು. ಮಕ್ಕಳು ಮುಂದೆ ಬರಬೇಕು. ಮಾನಸಿಕ, ದೈಹಿಕವಾಗಿ ಬೆಳೆಯಬೇಕಾದರೆ ಅವರಿಗೆ ಸಂಸ್ಕಾರ ತುಂಬಬೇಕು. ಅದನ್ನು ರಂಗಭೂಮಿ ಕೊಡಬಲ್ಲದು. ಮಕ್ಕಳಿಗೆ ನಾಟಕ, ಯಕ್ಷಗಾನವನ್ನು ತೋರಿಸಿಯಾದರೂ ಸಂಸ್ಕಾರ ಕೊಡಬೇಕು. ಇದರಿಂದ ಮುಂದಿನ ಭವಿಷ್ಯ ಭದ್ರವಾಗುತ್ತದೆ ಎಂದರು.
ರಂಗಭೂಮಿ ಉಡುಪಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ನಾಟಕಗಳು ಸಮಾಜದ ಜ್ವಲಂತ ಸಮಸ್ಯೆಗಳನ್ನು ನಮ್ಮ ಮುಂದೆ ತೆರೆದಿತ್ತವೆ. ಈ ನಾಟಕಗಳನ್ನು ನೋಡಿಯಾದರೂ ನಮ್ಮೊಳಗೆ ಪರಿವರ್ತನೆ ಬರಬೇಕು. ಇಂತಹ ಉತ್ತಮ ಸಂದೇಶಗಳನ್ನು ರಂಗಭೂಮಿ ಸಮಾಜಕ್ಕೆ ಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಟಕಕಾರ ರವಿಕುಮಾರ್ ಕಡೆಕಾರ್ ಅವರಿಗೆ ರಂಗಸನ್ಮಾನ ನಡೆಯಿತು. ರಂಗಭೂಮಿಯ ಉಪಾಧ್ಯಕ್ಷ ಆರ್.ಎನ್.ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿ, ವಿವೇಕಾನಂದ ಎನ್. ಕಾರ್ಯಕ್ರಮ ನಿರೂಪಿಸಿದರು. ರವಿರಾಜ್ ನಾಯಕ್ ವಂದಿಸಿದರು. ಬಳಿಕ ನೀನಾಸಂ ತಿರುಗಾಟ ತಂಡದ ನಾಟಕ ’ಅವತರಣಂ ಭ್ರಾಂತಾಲಯಟ’ ಪ್ರದರ್ಶನಗೊಂಡಿತು.







