ಬ್ರಹ್ಮಾವರ | ಸುತ್ತಿಗೆಯಿಂದ ಹೊಡೆದು ತಂದೆ ತಾಯಿಯನ್ನೇ ಬರ್ಬರವಾಗಿ ಕೊಂದ ಮಗ !
ಆರೋಪಿ ಸೆರೆ

ಶಾಹಿದ್ ಅಲಿ
ಬ್ರಹ್ಮಾವರ, ಆ.24: ಕ್ಷುಲ್ಲಕ ಕಾರಣಕ್ಕಾಗಿ ಮಗನೇ ತನ್ನ ತಂದೆ ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಆ.23ರಂದು ರಾತ್ರಿ ವೇಳೆ ಬ್ರಹ್ಮಾವರ ಸಮೀಪದ ಗಾಂಧಿನಗರ ಬೈಕಾಡಿ ಎಂಬಲ್ಲಿ ನಡೆದಿದೆ.
ಕೊಲೆಗೀಡಾದವರನ್ನು ಬೈಕಾಡಿಯ ಮೆಹಬೂಬ್ ಅಲಿ(55) ಹಾಗೂ ಅವರ ಪತ್ನಿ ಸಂಶಾದ್ ಬೇಗಂ(50) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಮೃತರ ಮಗ ಶಾಹಿದ್ ಅಲಿ(31) ಎಂಬಾತನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಶಾಹಿದ್ ಅಲಿ, ಆ.23ರಂದು ರಾತ್ರಿ ವೇಳೆ ತಂದೆ ತಾಯಿ ಜೊತೆ ಜಗಳ ವಾಡಿ, ಇಬ್ಬರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆ.24ರಂದು ಬೆಳಗ್ಗೆ 9ಗಂಟೆಗೆ ಪೊಲೀಸರಿಗೆ ಕರೆ ಮಾಡಿದ ಆತ, ತಾನು ತಂದೆ ತಾಯಿಯನ್ನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದನು. ಅದರಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದು ಬಂದಿದೆ.
ಮೆಹಬೂಬ್ ಅಲಿ ಮಲ್ಪೆಯಲ್ಲಿ ಮೀನಿನ ವಾಹನದಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಇವರಿಗೆ ಶಾಹಿದ್ ಅಲಿ ಮತ್ತು ಶಾಹಿನ್ ಬೇಗಂ ಇಬ್ಬರು ಮಕ್ಕಳು. ಶಾಹಿನ್ ಬೇಗಂ ಮದುವೆಯಾಗಿ ಪತಿಯ ಮನೆಯಲ್ಲಿ ಇದ್ದಾರೆ. ರಾತ್ರಿ ಮನೆ ಯಲ್ಲಿ ತಂದೆತಾಯಿ ಮತ್ತು ಮಗ ಮಾತ್ರ ಇದ್ದರು. ಈ ಸಂದರ್ಭದಲ್ಲಿ ಶಾಹಿದ್ ಅಲಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮೊದಲಾದ ವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ನಿಖರವಾದ ಕಾರಣದ ಬಗ್ಗೆ ತನಿಖೆ: ಎಸ್ಪಿ
‘ವಯಸ್ಸಾದರೂ ಯಾವುದೇ ಪ್ರಯೋಜನ ಇಲ್ಲ. 30 ವರ್ಷಗಳಾದರೂ ಮದುವೆ ಆಗಿಲ್ಲ ಎಂಬುದಾಗಿ ತಂದೆತಾಯಿ ಪ್ರತಿನಿತ್ಯ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಅಲ್ಲದೆ ದೈಹಿಕವಾಗಿಯೂ ಹಲ್ಲೆ ಮಾಡುತ್ತಿದ್ದರು. ಇದಕ್ಕೆ ತಾಯಿ ಕೂಡ ಬೆಂಬಲ ನೀಡುತ್ತಿದ್ದರು. ಈ ಕಾರಣಕ್ಕಾಗಿಯೇ ನಾನು ಅವರಿಬ್ಬರನ್ನು ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಶಾಹಿದ್ ಅಲಿ ಹೇಳಿಕೊಂಡಿದ್ದಾನೆʼ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಆರೋಪಿ ಹೇಳಿಕೆ ನೀಡಿದರೂ ಕೂಡ ಕೊಲೆಗೆ ನಿಖರವಾದ ಕಾರಣ ತನಿಖೆ ಯಿಂದ ತಿಳಿದುಬರಬೇಕಾಗಿದೆ. ಆರೋಪಿಯನ್ನು ಕೌನ್ಸಿಲಿಂಗ್ಗೆ ಒಳಪಡಿಸಿ ಆತನ ಮಾನಸಿಕ ಸ್ಥಿತಿಯನ್ನು ಕೂಡ ತಿಳಿದುಕೊಳ್ಳಬೇಕಾಗಿದೆ. ಅದೇ ರೀತಿ ಆತ ಮೊಬೈಲ್ನಲ್ಲಿ ಗೇಮಿಂಗ್ ಎಡಿಕ್ಟ್ ಕೂಡ ಆಗಿದ್ದನು ಎಂದು ಹೇಳಲಾಗುತ್ತಿದೆ. ಆ ನಿಟ್ಟಿನಲ್ಲಿ ಆತ ಮೊಬೈಲ್ ಪೋನ್ ಕೂಡ ಪರಿಶೀಲನೆ ಮಾಡಬೇಕಾಗಿದೆ. ಆತ ಮಾದಕ ದ್ರವ್ಯ ಸೇವನೆ ಮಾಡಿರುವುದು ಕಂಡು ಬಂದಿಲ್ಲ. ಈ ನಿಟ್ಟಿನಲ್ಲಿ ಆತನ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
14 ಗಂಟೆ ಮೃತದೇಹದೊಂದಿಗೆ ಕಳೆದಿದ್ದ!
ಶಾಹಿದ್ ಅಲಿ, ತನ್ನ ತಂದೆತಾಯಿಯನ್ನು ಆ.23ರಂದು ರಾತ್ರಿ ಏಳು ಗಂಟೆಗೆ ಕೊಲೆ ಮಾಡಿದ್ದು, ಆ.24ರಂದು ಬೆಳಗ್ಗೆ 9ಗಂಟೆಗೆ 112 ಕಂಟ್ರೋಲ್ ರೂಮಿಗೆ ಕರೆ ಮಾಡಿ ಮಾಹಿತಿ ನೀಡಿದ್ದನು. ಅಲ್ಲಿಯವರೆಗೆ ಅಂದರೆ ಸುಮಾರು 14 ಗಂಟೆಗಳ ಕಾಲ ಆತ ತನ್ನ ತಂದೆತಾಯಿ ಮೃತದೇಹಗಳ ಜೊತೆ ಕಳೆದಿದ್ದನು ಎಂದು ತಿಳಿದುಬಂದಿದೆ.
ತಂದೆಯನ್ನು ಮನೆಯ ಹಾಲ್ನಲ್ಲಿ ಸುತ್ತಿಗೆಯಿಂದ ಹೊಡೆದು ಕೊಂದ ಬಳಿಕ ಬೆಡ್ರೂಮಿನಲ್ಲಿದ್ದ ತಾಯಿಯನ್ನು ಹತ್ಯೆ ಮಾಡಿದ್ದಾನೆ. ಮಗ ಕೊಲೆ ಮಾಡುವಾಗ ತಾಯಿ ಸಾಕಷ್ಟು ಹೋರಾಟ ಮಾಡಿರುವುದು ಕಂಡು ಬಂದಿದೆ. ಈ ಹೋರಾಟದಲ್ಲಿ ಅವರ ಬೆರಳು ಕೂಡ ತುಂಡಾಗಿತ್ತು. ಇವರ ದೇಹದ ಮೇಲೆ ಎಷ್ಟು ಗಾಯಗಳಾಗಿವೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
‘ತಂದೆ ತಾಯಿ ಮತ್ತು ಮಗ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಅವನನ್ನು ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಆತ ಮೌನವಾಗಿ ಒಬ್ಬನೇ ಇರುತ್ತಿದ್ದನು. ಆದರೆ ಮೊಬೈಲ್ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದನು. ತಂದೆ ತಾಯಿಯಿಂದ ಅವನಿಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ’
-ಸತ್ತಾರ್ ಮಲ್ಪೆ, ಮೃತ ಮಹಿಳೆಯ ಸಹೋದರ






