ಭಾರತೀಯ ಸೇನೆ ಹೆಸರಿನಲ್ಲಿ ಉಡುಪಿ ಧರ್ಮಪ್ರಾಂತದ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ

ಉಡುಪಿ: ಭಾರತೀಯ ಕೆಥೊಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಸೂಚನೆಯ ಮೇರೆಗೆ ಉಡುಪಿ ಧರ್ಮಪ್ರಾಂtದ ಚರ್ಚುಗಳಲ್ಲಿ ರವಿವಾರ ಭಾರತೀಯ ಸೇನೆಗೆ ಹಾಗೂ ಯೋಧರಿಗೆ ಒಳಿತಾಗುವಂತೆ ಆಶಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರತಿಯೊಂದು ಚರ್ಚುಗಳಲ್ಲಿ ರವಿವಾರದ ಬಲಿಪೂಜೆಯ ವೇಳೆ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರಿಗೆ ಒಳಿತಾಗುವಂತೆ ಕೋರಿ ವಿಶೇಷ ಪರಮ ಪ್ರಸಾದದ ಆರಾಧನೆಯ ಮೂಲಕ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು.
ತಮ್ಮ ಅಧಿಕೃತ ವಾರ್ಷಿಕ ಭೇಟಿಯಲ್ಲಿರುವ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ.ಫಾ. ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಕಾರ್ಕಳ ತಾಲೂಕಿನ ಬೆಳ್ಮಣ್ ಸಂತ ಜೋಸೆಫರ ಚರ್ಚಿನಲ್ಲಿ ವಿಶೇಷ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ದೇಶ ಕಾಯುವ ಸೈನಿಕರಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಕ್ರೈಸ್ತ ಧರ್ಮಸಭೆಗೆ ನೂತನ ಜಗದ್ಗುರುವಾಗಿ ಆಯ್ಕೆಯಾಗಿರುವ ಪೋಪ್ 14ನೇ ಲಿಯೋ ಅವರಿಗೆ ಶುಭಕೋರಿ ವಿಶೇಷ ಆರಾಧನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಧರ್ಮಾಧ್ಯಕ್ಷರು, ಇಂದು ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯ ಯೇಸು ಒಳ್ಳೆಯ ಕುರುಬರ ಹಬ್ಬದ ಆಚರಣೆಯನ್ನು ಮಾಡುತ್ತಿದ್ದು ಇದೇ ಸಂದರ್ಭದಲ್ಲಿ ಜಗತ್ತಿಗೆ ಮುಗ್ಧ ಮನಸ್ಸಿನ ಶಾಂತಿ ದೂತರಾಗಿ ಜಗದ್ಗುರು ಪೋಪ್ 14ನೇ ಲಿಯೋ ಆಯ್ಕೆಯಾಗಿದ್ದಾರೆ. ದೇಶದ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭೀತಿ ಆವರಿಸಿದ್ದು ನಮ್ಮ ಸೈನಿಕರು ತಮ್ಮ ಜೀವದ ಹಂಗು ತೊರೆದು ತಮ್ಮ ದೇಶದ ಪ್ರಜೆಗಳ ರಕ್ಷಣೆಗೆ ಕಟಿಬದ್ಧರಾಗಿ ನಿಂತಿದ್ದಾರೆ. ಅವರಿಗಾಗಿ ನಮ್ಮ ಪ್ರಾರ್ಥನೆ ಅನುದಿನವೂ ಇರಬೇಕಾಗಿದೆ.
ನೂತನ ಪೋಪ್ ಅವರು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಕೈಜೋಡಿಸುವಂತೆ ಕರೆನೀಡಿದ್ದು, ಸಂವಾದ ಮಾತುಕತೆಗಳ ಮೂಲಕ ಸೇತುವೆ ನಿರ್ಮಿಸಿ ಎಲ್ಲರೂ ಪರಸ್ಪರ ಸಹೋದರರಂತೆ ಬಾಳಲು ಕರೆ ನೀಡಿರುತ್ತಾರೆ. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಬೇಕು ಎನ್ನುವುದು ಅವರ ಬಯಕೆಯಾಗಿದ್ದು ನಮ್ಮ ದೇಶದಲ್ಲಿಯೂ ಕೂಡ ಯುದ್ದದ ಕಾರ್ಮೋಡ ತಿಳಿಗೊಂಡು ಶಾಂತಿಯು ನೆಲೆಸಲಿ. ಈ ನಿಟ್ಟಿನಲ್ಲಿ ಹಿಂಸೆಯ ಮಾರ್ಗವನ್ನು ಕೈಬಿಟ್ಟು ಶಾಂತಿ ಸ್ಥಾಪನೆಯತ್ತ ಎರಡೂ ದೇಶಗಳೂ ಮುಂದೆ ಬರಲಿ ಮತ್ತು ದೇಶದ ಸೈನಿಕರ ಕರ್ತವ್ಯಕ್ಕೆ ಸದಾ ಪ್ರತಿಯೊಬ್ಬರು ಬೆಂಬಲವಾಗಿ ನಿಲ್ಲುವುದರ ಮೂಲಕ ಅವರಲ್ಲಿ ಆತ್ಮ ಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡೋಣ ಎಂದರು.
ಈ ವೇಳೆ ಚರ್ಚಿನ ಧರ್ಮಗುರು ಫ್ರೆಡ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ಅರ್ನಾಲ್ಡ್ ಮಥಾಯಸ್, ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚಿನ ಧರ್ಮಗುರು ಕ್ಲೇಮಂಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.







