ಭಾರತ ರಂಗ ಮಹೋತ್ಸವಕ್ಕೆ ‘ಶ್ರೀದೇವಿ ಮಹಾತ್ಮೆ’ ನಾಟಕ ಆಯ್ಕೆ

ಉಡುಪಿ, ಜ.14: ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸುತ್ತಿ ರುವ 25ನೇ ಭಾರತ ರಂಗ ಮಹೋತ್ಸವ-2026ಕ್ಕೆ ಉಡುಪಿ ಪರ್ಕಳದ ಅಂಬಾಭವಾನಿ ಕಲಾ ಆರ್ಟ್ಸ್ ತಂಡದ ನಾಟಕ ‘ಶ್ರೀದೇವಿ ಮಹಾತ್ಮೆ’ ಅಧಿಕೃತವಾಗಿ ಆಯ್ಕೆಯಾಗಿದೆ ಎಂದು ತಂಡದ ಸಂಯೋಜಕ ಅಶೋಕ್ ನಾಯ್ಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ನಾಟಕವು ಫೆ.3ರಂದು ನವದೆಹಲಿ ಮಂಡಿ ಹೌಸ್‌ನ ರಾಷ್ಟ್ರೀಯ ನಾಟಕ ಶಾಲೆಯ ಮುಕ್ತ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳಲಿದೆ. ದೇಶ ವಿದೇಶಗಳಿಂದ ಆಯ್ಕೆಯಾದ 200ಕ್ಕೂ ಹೆಚ್ಚು ನಾಟಕಗಳ ಮಧ್ಯೆ ಜಿಲ್ಲೆಯ ತಂಡಕ್ಕೆ ಈ ಗೌರವ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಾಟಕದ ನಿರ್ದೇಶಕ ಭುವನ್ ಮಣಿಪಾಲ್ ನಿನಾಸಂ ಪದವೀಧರಾಗಿದ್ದು, ಯಕ್ಷಗಾನ ಮತ್ತು ಸಮಕಾಲೀನ ರಂಗಭೂಮಿಯ ಅನುಭವ ಹೊಂದಿದ ನಿರ್ದೇಶಕರಾಗಿದ್ದಾರೆ. ಯಕ್ಷಗಾನ ಸಂಪ್ರದಾಯಿಕ ಶೈಲಿಯನ್ನು ಸಮಕಾಲೀನ ರಂಗಭೂಮಿಯೊಂದಿಗೆ ಸಮಯೋಜಿಸಿರುವ ಈ ನಾಟಕವು 90ನಿಮಿಷಗಳ ರೂಪಾಂತರಿತ ಪ್ರದರ್ಶನವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಾಟಕ ನಿರ್ದೇಶಕ ಭುವನ್ ಮಣಿಪಾಲ್, ತಂಡದ ಅಧ್ಯಕ್ಷ ಕೃಷ್ಣ ನಾಯ್ಕ್ ಮಾರ್ಪಳ್ಳಿ, ರಾಘವೇಂದ್ರ ನಾಯ್ಕ್, ಆನಂದ ನಾಯ್ಕ್, ಪ್ರಜ್ಞಾ ರಾಜೇಶ್ವರಿ ಉಪಸ್ಥಿತರಿದ್ದರು.







