ಶ್ರೀಲ ಪ್ರಭುಪಾದರು ವಿಶ್ವಗುರುಗಳು: ಪುತ್ತಿಗೆ ಶ್ರೀ

ಉಡುಪಿ, ಡಿ.21: ಪಾಶ್ಚಾತ್ಯ ದೇಶಗಳಿಗೆ ಶ್ರೀಕೃಷ್ಣನ ಭಕ್ತಿ ವೇದಾಂತ ಸಾರವನ್ನು ತಮ್ಮ ಉಪನ್ಯಾಸ ಹಾಗೂ ಭಕ್ತಿ ಚಳುವಳಿಯ ಮೂಲಕ ಪಸರಿಸಿದ ಶ್ರೀಲ ಪ್ರಭುಪಾದರು ನಿಜಾರ್ಥದಲ್ಲಿಯೇ ವಿಶ್ವಗುರುವಾಗಿದ್ದಾರೆ ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಬೆಂಗಳೂರಿನ ಇಸ್ಕಾನ್ ವತಿಯಿಂದ ಇಸ್ಕಾನ್ ಸಂಸ್ಥಾಪಕ ಶೀಲ ಪ್ರಭುಪಾದ ಅವರಿಗೆ ಕಳೆದ ಕುಂಭಮೇಳದ ಸಂದರ್ಭದಲ್ಲಿ ಅಖಾಡ ಪರಿಷತ್ ವತಿಯಿಂದ ನೀಡಲಾದ ‘ವಿಶ್ವ ಗುರು’ ಗೌರವವನ್ನು ಶ್ರೀಕೃಷ್ಣನಿಗೆ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಶ್ರೀಕೃಷ್ಣನೇ ಹೇಳಿದಂತೆ ಕಲಿಯುಗದಲ್ಲಿ ಧರ್ಮ ರಕ್ಷಣೆಗಾಗಿ ಭಗವಂತನ ಅವತಾರ ಭಕ್ತರ ರೂಪದಲ್ಲಿ ಆಗುತ್ತದೆ. ಇದರಂತೆ ಆಚಾರ್ಯ ಮಧ್ವರು, ಶ್ರೀಪ್ರಭುಪಾದರ ಅವತಾರವಾಗಿದೆ. ವಿಶ್ವ ಗುರುವಾಗಿ ಕೃಷ್ಣಭಕ್ತಿ ಸಾರವನ್ನು ಜಗದೆಲ್ಲೆಡೆ ಸಾರಿದ ಪ್ರಭುಪಾದಾರಿಗೆ ಇದೀಗ ಕೃಷ್ಣ ಹಾಗೂ ಆಚಾರ್ಯ ಮಧ್ವರು ಒಂದಾಗಿ ಮತ್ತೊಮ್ಮೆ ವಿಶ್ವ ಗುರು ಉಪಾಧಿ ನೀಡಿ ಹರಸಿದ್ದಾರೆ. ಹೀಗಾಗಿ ಇದು ಮಿನಿ ಕುಂಭವಾಗಿದೆ ಎಂದರು.
ಹರಿದ್ವಾರ ನಿರಂಜನಿ ಅಖಾಡದ ಮಹಾಮಂಡಲೇಶ್ವರ ಶ್ರೀಕೈಲಾಸಾನಂದ ಗಿರಿ ಮಹಾರಾಜ್ ಅವರಿಗೆ ಪರ್ಯಾಯ ಪುತ್ತಿಗೆ ಸ್ವಾಮೀಜಿ ಶ್ರೀಕೃಷ್ಣನ ಕಡೆಗೋಲು, ಪ್ರಸಾದ ನೀಡಿ ಗೌರವಿಸಿದರು. ಡಾ.ಕಬ್ಬಿನಾಲೆ ವಸಂತ ಕುಮಾರ್ ಅವರು ಸಂಪಾದಿಸಿದ ‘ಶ್ರೀಲ ಪ್ರಭುಪಾದ ಚೈತನ್ಯಮೃತಂ’ ಕನ್ನಡ ಕಾವ್ಯದ ಲೋಕಾರ್ಪಣೆ ನಡೆಯಿತು.
ಇಸ್ಕಾನ್ ಬೆಂಗಳೂರು ಇದರ ಅಕ್ಷಯಪಾತ್ರ ಫೌಂಡೇಶನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತಿಗೆ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ, ಇಸ್ಕಾನ್ ಬೆಂಗಳೂರಿನ ಚೈತನ್ಯ ದಾಸ್, ವಾಸುದೇವ ಕೇಶವದಾಸ್ ಮೊದಲಾದವರು ಉಪಸ್ಥಿತರಿದ್ದರು.







