‘ಸಾಮರಸ್ಯ’ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿದ ಶ್ರೀಮಾದಾರ ಚೆನ್ನಯ್ಯ ಸ್ವಾಮೀಜಿ
"ಧರ್ಮದ ವಿಜೃಂಭಣೆ, ಸ್ವಾರ್ಥ ರಾಜಕಾರಣದಿಂದ ಪ್ರಜಾಪ್ರಭುತ್ವ ಬುಡಮೇಲಾಗುವ ಅಪಾಯ"

ಉಡುಪಿ: ಧರ್ಮದ ವಿಜೃಂಭಣೆ ಹಾಗೂ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳಲು ಇಂದು ಸಾಮರಸ್ಯವನ್ನು ಬಲಿ ಕೊಡಲಾಗುತ್ತದೆ. ಇದೇ ಪರಿಸ್ಥಿತಿ ಈ ದೇಶದಲ್ಲಿ ಮುಂದುವರೆದರೆ ಕೆಲವೇ ದಿನಗಳಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವ ಅಪಾಯ ಇದೆ ಎಂದು ಚಿತ್ರದುರ್ಗ ಶ್ರೀಮಾದಾರ ಚೆನ್ನಯ್ಯ ಗುರುಪೀಠದ ಶ್ರೀಬಸವ ಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಅಮೋಘ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಾಮರಸ್ಯ ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಧರ್ಮ ವಿಜೃಂಭಿಸುತ್ತಿರುವ ಹಾಗೂ ರಾಜಕಾರಣ ಗಟ್ಟಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಾರಮಸ್ಯ ಹದಗೆಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ದೇಶದಲ್ಲಿ ಸಾಮರಸ್ಯ ದುರ್ಬಲವಾದರೆ ಇಲ್ಲಿನ ಪ್ರಜಾಪ್ರಭುತ್ವ ದೊಡ್ಡ ಹೊಡೆತ ಬೀಳಲಿದೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ ಎಂದರು.
ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ದುಬರ್ಳಕೆಯಾಗುತ್ತಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಲನ್ನು ಮಾನವ ಹಕ್ಕುಗಳಿಗಾಗಿ ಮಾರ್ಗದರ್ಶನ ಮಾಡಿ ಹೋಗಿದ್ದಾರೆ. ಅಲ್ಲದೆ ಅದನ್ನು ಕಾನೂನಾತ್ಮಕವಾಗಿಯೂ ರೂಪಿಸಿದ್ದಾರೆ. ಆದರೆ ಈಗ ಇವು ಎರಡನ್ನು ನಾವು ದುಷ್ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಸಂವಿದಾನ ಬದ್ಧ ಸ್ಥಾನಮಾನಕ್ಕಾಗಿ ಪ್ರಶ್ನೆ ಮಾಡುವ ಬದಲು ಬೇಡ ವಿಚಾರಗಳನ್ನು ಹೆಚ್ಚು ಪ್ರಶ್ನೆ ಮಾಡುತ್ತಿದ್ದೇವೆ. ಇದು ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕದ ವಾತಾ ರವಣವನ್ನು ನಿರ್ಮಾಣ ಮಾಡಿದೆ ಎಂದು ಅವರು ತಿಳಿಸಿದರು.
ಪ್ರಶ್ನೆ ಮತ್ತು ಟೀಕೆಗಳನ್ನು ಇಂದು ರಾಜಕಾರಣಿಗಳು ತಮ್ಮ ಅಸ್ತಿತ್ವ ಮತ್ತು ರಾಜಕಾರಣಕ್ಕೆ ಮಾಡುತ್ತಿದ್ದಾರೆ. ನಮ್ಮ ಧರ್ಮವನ್ನು ವೈಭವೀಕರಣಗೊಳಿಸ ಬೇಕೆಂಬ ಚಿಂತನೆ ಬಂದಾಗ ಅಲ್ಲಿ ಸಾಮರಸ್ಯ ಹದಗೆಡುತ್ತದೆ. ಅದರ ಜೊತೆ ರಾಜಕಾರಣದ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕೆಂಬ ಯೋಚನೆ ಮೂಡಿದಾಗ ಸಾಮರಸ್ಯಕ್ಕೆ ಧಕ್ಕೆ ಬರುತ್ತದೆ. ಈ ಎರಡೂ ವಿಚಾರಗಳ ಬಗ್ಗೆ ಕಾಳಜಿ ವಹಿಸಬೇಕಾದ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಲೇಖಕಿ ಪೂರ್ಣಿಮಾ ಸುರೇಶ್ ಅವರ ಸಂತೆಯೊಳಗಿನ ಏಕಾಂತ ಹಾಗೂ ಪಾರ್ವತಿ ಜಿ.ಐತಾಳ್ ಅನುವಾದಿತ ದಿ ಅಕ್ವೇರಿಯಂ ಕೃತಿ ಯನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷತೆಯನ್ನು ವಿದ್ವಾಂಸ ಡಾ.ವಿಷ್ಣು ಭಟ್ ಪಾದೆಕಲ್ಲು ವಹಿಸಿದ್ದರು.
ಹಿರಿಯ ಲೇಖಕಿ ಪಾವರ್ತಿ ಜಿ. ಐತಾಳ್ ಮಾತನಾಡಿದರು. ಎಂಜಿಎಂ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಕೃತಿ ಪರಿಚಯ ಮಾಡಿದರು. ಸಾಮಾಜಿಕ ಕಾರ್ಯಕರ್ತ ವಾದಿರಾಜ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಅಡಿಗ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಅಮೋಘ ಸಂಚಾಲಕ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.
‘ಭಾರತದಲ್ಲಿ ಜಾತಿ ಇಲ್ಲದೆ ಇರಲು ಆಗುವುದಿಲ್ಲ. ಆದರೆ ಆ ಜಾತಿ, ಸಂಸ್ಕೃತಿ, ಸಂಸ್ಕಾರವನ್ನು ತಮ್ಮ ತಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ನಮ್ಮ ಯಾವುದೇ ಅಭ್ಯಂತರ, ಅಪಸ್ವರ ಇಲ್ಲ. ಮನೆ ಹೊರಗಡೆ ಬಂದ ನಂತರ ನಾವೆಲ್ಲ ಒಂದೇ ಭಾವನೆ ಎಂಬ ಇರಬೇಕು. ಇಲ್ಲದಿದ್ದರೆ ನಾವು ಸಾಮರಸ್ಯದ ಬಗ್ಗೆ ಎಷ್ಟೆ ಭಾಷಣ ಮಾಡಿದರೂ ಅದು ಮಾತಿಗೆ ಮಾತ್ರ ಸೀಮಿತವಾಗುತ್ತದೆ. ಆದರೆ ಕೃತಿಯಲ್ಲಿ ಹಿನ್ನಡೆ ಕಾಣಲು ಸಾಧ್ಯವಾಗುತ್ತದೆ’
-ಶ್ರೀಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ







