ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ವೆಲ್ಫೇರ್ ಪಾರ್ಟಿಯಿಂದ ರಾಜ್ಯ ವ್ಯಾಪಿ ಅಭಿಯಾನ

ಉಡುಪಿ, ನ.2: ರಾಜ್ಯದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು, ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ನಿವಾರಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ನ.1ರಿಂದ 10ರವರೆಗೆ ರಾಜ್ಯಾದ್ಯಂತ ದ್ವೇಷ ಅಳಿಸೋಣ, ದೇಶ ಉಳಿಸೋಣ ಎಂಬ ರಾಜ್ಯವ್ಯಾಪಿ ಅಭಿಯಾನವನ್ನು ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ಹಮ್ಮಿಕೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬುಧವಾರ ನ.1ರಂದು ರಾಜ್ಯ ಕಚೇರಿ ಹಾಗೂ ರಾಜ್ಯದ ಎಲ್ಲಾ ಘಟಕಗಳಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಅಭಿಯಾನದ ಉದ್ದೇಶ ರಾಜ್ಯದ ನಾಗರಿಕರಲ್ಲಿ ದ್ವೇಷ ರಾಜಕೀಯದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕುಗ್ಗುತ್ತಿರುವ ರಾಜಕೀಯ ಪ್ರಾತಿನಿಧಿತ್ವ ಮತ್ತು ಅದರ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಇದರೊಂದಿಗೆ ಮೌಲ್ಯಾಧಾರಿತ ರಾಜಕೀಯದ ಮಹತ್ವದ ಬಗ್ಗೆ ತಿಳಿಸುವುದು ಹಾಗೂ ಪ್ರೀತಿ, ಶಾಂತಿ ಸಹೋದರತೆ ಬಯಸುವ ನಾಗರಿಕರನ್ನು ಒಗ್ಗೂಡಿಸಿ ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ಧ್ವನಿ ಎತ್ತಲು ಪ್ರೇರೇಪಿಸುವುದಾಗಿದೆ ಎಂದರು.
ಹತ್ತು ದಿನಗಳ ಅಭಿಯಾನದ ಸಂಧರ್ಭದಲ್ಲಿ ಬಿತ್ತಿಪತ್ರ ಬಿಡುಗಡೆ, ಪತ್ರಿಕಾಗೋಷ್ಠಿ, ಅಭಿಯಾನದ ಕುರಿತು ವೀಡಿಯೋ ಬಿಡುಗಡೆ, ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್, ಮಾನವ ಸರಪಳಿ, ಸಾರ್ವಜನಿಕ ಸಭೆ, ಜಾಥಾ, ಬೈಕ್ ರ್ಯಾಲಿ, ರಾಷ್ಟ್ರಪತಿಗಳಿಗೆ ಮನವಿ ಮುಂತಾದ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಉಡುಪಿ ಜಿಲ್ಲೆಯಲ್ಲೂ ಅಭಿಯಾನದಂಗವಾಗಿ ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್, ಮಾನವ ಸರಪಳಿ, ಸಾರ್ವಜನಿಕ ಸಭೆ ಮುಂತಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಅಬ್ದುಲ್ ಅಝೀಝ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಭಿಯಾನದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿಯ ಉಪಾಧ್ಯಕ್ಷ ಶಹಜಹಾನ್ ತೋನ್ಸೆ, ರಿಯಾಝ್ ಕುಕ್ಕಿಕಟ್ಟೆ ಹಾಗೂ ನಿಕಟಪೂರ್ವ ಅಧ್ಯಕ್ಷ ಅನ್ವರ್ ಅಲಿ ಕಾಪು ಉಪಸ್ಥಿತರಿದ್ದರು.







