ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ತಪ್ಪಿಸಿದ್ದು ಯಾರೆಂಬುದು ಗೊತ್ತಿಲ್ಲ: ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಕನಕ ಕಿಂಡಿಗೆ ನಾನು ಸೇವಾ ರೂಪದಲ್ಲಿ ಸ್ವರ್ಣ ಕವಚವನ್ನು ಸಮರ್ಪಿಸಿದ್ದೇನೆ. ಇದರ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿರುವುದು ನನಗೆ ತುಂಬಾ ಸಂತೋಷ ತಂದಿದೆ. ಈ ಸಂದರ್ಭದಲ್ಲಿ ನನಗೂ ಭಾಗವಹಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಕಾರಣಾಂತರದಿಂದ ನನಗೆ ಅವಕಾಶ ತಪ್ಪಿ ಹೋಗಿದೆ. ಇದನ್ನು ಯಾರು ತಪ್ಪಿಸಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧ ನಾಲ್ಕು ಬಾರಿ ನನ್ನ ಆಧಾರ್ ಕಾರ್ಡ್ ಪ್ರತಿ, ಫೋಟೋವನ್ನು ಪಡೆದುಕೊಳ್ಳಲಾಗಿತ್ತು. ಆದರೆ ಪಿಎಂ ಕಚೇರಿಯಿಂದ ಬಂದ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದ ವಿಚಾರ ನ.27ರ ರಾತ್ರಿ ಎಸ್ಪಿ ಮೂಲಕ ತಿಳಿದುಬಂತು. ಆ ಬಗ್ಗೆ ನನಗೆ ದುಃಖ, ಬೇಸರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನು ಯಾರು ತಪ್ಪಿಸಿದ್ದಾರೆಂದು ನನಗೆ ಗೊತ್ತಿಲ್ಲ. ಇಂತಹವರು ತಪ್ಪಿಸಿದ್ದಾರೆ ಎಂಬುದಾಗಿ ಊಹೆ ಮಾಡಲು ಕೂಡ ನಾನು ಬಯಸುವುದಿಲ್ಲ. ನಾನು ಅಲ್ಲಿಗೆ ಹೋಗದಂತೆ ಯಾರು ತಡೆದಿದ್ದಾರೆಂಬುದು ಕೂಡ ನನಗೆ ಗೊತ್ತಿಲ್ಲ. ಹಾಗಾಗಿ ಯಾರ ಮೇಲೆಯೂ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುವುದಿಲ್ಲ. ಯಾರಾದರೂ ತಪ್ಪಿಸಿದ್ದರೆ ಅದು ಅವರ ರಾಜಕೀಯ ತಪ್ಪು ಹೆಜ್ಜೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ, ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ದಿವಾಕರ್ ಶೆಟ್ಟಿ, ರೇಷ್ಮಾ ಉದಯ ಶೆಟ್ಟಿ, ಶ್ರೀನಿಧಿ ಹೆಗ್ಡೆ, ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು.







