ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಗೃಹಬಳಕೆ ಅನಿಲ ದಾಸ್ತಾನು; ಆತಂಕ ಬೇಡ: ಡಿಸಿ ಸ್ವರೂಪ ಭರವಸೆ

ಉಡುಪಿ, ಮಾ.12: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅಡುಗೆ ಅನಿಲ ಗ್ರಾಹಕರು ಆತಂಕ ಪಡ ಬೇಕಾದ ಅಗತ್ಯವಿಲ್ಲ; ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಜಿಲ್ಲೆಯ ಜನತೆಗೆ ಭರವಸೆ ನೀಡಿದ್ದಾರೆ.
ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಕುರಿತಂತೆ ಅನಿಲ ಜಾಡಿ ಏಜೆನ್ಸಿ ಮಾಲಕರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೊಲ್ಲಿ ರಾಷ್ಟ್ರಗಳೂ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಕೊರತೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಏಕಕಾಲದಲ್ಲಿ ಅನಿಲ ಸಂಪರ್ಕಕ್ಕೆ ಬುಕ್ಕಿಂಗ್ ಮಾಡುತ್ತಿದ್ದು, ಇದರಿಂದ ಬುಕ್ಕಿಂಗ್ ಕ್ರ್ಯಾಷ್ ಆಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳು, ವಸತಿ ನಿಲಯಗಳು, ಗೃಹ ಬಳಕೆ, ಅತೀ ಅವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳು, ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಆದ್ಯತೆಯ ಮೇಲೆ ಅನಿಲ ಪೂರೈಸಲು ಕ್ರಮಕೈಗೊಳ್ಳುವಂತೆ ಅವರು ಸಂಬಂಧಿತರಿಗೆ ಸೂಚನೆಗಳನ್ನು ನೀಡಿದರು.
ಯುದ್ಧದ ಪರಿಣಾಮದಿಂದ ದೇಶದಲ್ಲಿ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳು, ವಂದತಿಗಳಿಗೆ ಜಿಲ್ಲೆಯ ಸಾರ್ವಜನಿಕರು ಕಿವಿಗೊಡದಂತೆ ಮನವಿ ಮಾಡಿದ ಅವರು, ಜನರಿಗೆ ಈ ಬಗ್ಗೆ ಪ್ರಸ್ತುತ ಇರುವ ಸನ್ನಿವೇಶವನ್ನು ವಿವರಿಸಿ, ಅರಿವು ಮೂಡಿಸಬೇಕು. ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ ಎಂಬುದನ್ನು ಗ್ರಾಹಕರಿಗೆ ಮನದಟ್ಟು ಮಾಡಿಸಬೇಕು ಎಂದರು.
ಬಹುಸಂಖ್ಯಾತರಲ್ಲಿ ಎರಡು ಸಂಪರ್ಕ: ಜಿಲ್ಲೆಯಲ್ಲಿ ಅತಿಹೆಚ್ಚು ಗೃಹ ಬಳಕೆದಾರರು ಎರಡು ಅನಿಲ ಸಂಪರ್ಕ ಹೊಂದಿದ್ದು, ಏಕ ಸಿಲಿಂಡರ್ ಹೊಂದಿದ್ದವರಿಗೆ ಆದ್ಯತೆಯ ಮೇಲೆ ಅನಿಲ ಪೂರೈಕೆ ಮಾಡಬೇಕು. ಅನಿಲದ ಮಿತ ಬಳಕೆಯ ಬಗ್ಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮತ್ತು ಇತರರಿಗೆ ಜಾಗೃತಿ ಮೂಡಿಸಬೇಕು. ಆರೋಗ್ಯ, ವಾಣಿಜ್ಯ, ಕೈಗಾರಿಕೆ, ಇಂಧನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಅಗತ್ಯವಿರುವ ಅನಿಲ ಸಿಲಿಂಡರ್‌ಗಳ ಬೇಡಿಕೆಯ ಪಟ್ಟಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಬೇಡಿಕೆಯ ಭಾಗವನ್ನು ನಿರ್ವಹಿಸಲು ಪ್ರತಿ ಗ್ರಾಹಕರಿಗೆ ಕೊನೆಯ ಮರುಪೂರಣದ ದಿನಾಂಕದಿಂದ 25 ದಿನಗಳ ವರೆಗೆ ಇಂಟರ್-ಬುಕ್ಕಿಂಗ್ ಅವಧಿಯನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಆಹಾರ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ಪ್ರಚುರಪಡಿಸಬೇಕು ಎಂದ ಅವರು, ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಸಹಾಯವಾಣಿ 112 ಸಂಪರ್ಕಿಸಿ: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅನಿಲ ಪೂರೈಕೆ ಕುರಿತು ಸಾರ್ವಜನಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ, ಸಾರ್ವಜನಿಕರು ತೊಂದರೆಗಳನ್ನು ನಿವಾರಿಸಲು ಸಹಾಯ ವಾಣಿ ಸಂಖ್ಯೆ 112ನ್ನು ಸಂಪರ್ಕಿಸುವಂತೆ ಪ್ರಚಾರ ಮಾಡಬೇಕು ಹಾಗೂ ಸ್ವೀಕರಿಸಿದ ದೂರುಗಳನ್ನು ತಕ್ಷಣವೇ ಪರಿಹರಿಸುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಅನಾವಶ್ಯಕವಾಗಿ ಜನರು ಗೃಹ ಬಳಕೆಯ ಅನಿಲಗಳನ್ನು ಆಟೋಮೊಬೈಲ್‌ಗಳಿಗೆ ಬಳಸದಂತೆ ನೋಡಿಕೊಳ್ಳಬೇಕು. ಅನಿಲಗಳು ಕಾಳಸಂತೆಯಲ್ಲಿ ಮಾರಾಟ ಆಗದಂತೆ ನೋಡಿಕೊಳ್ಳಲು ಗ್ಯಾಸ್ ಏಜೆನ್ಸಿಗಳ ಸಪ್ಲಯರ್ಸ್, ಡೀಲರ್ಸ್ ಹಾಗೂ ಕಂಪೆನಿಗಳ ಸಹಕಾರ ಅತ್ಯಗತ್ಯ ಎಂದರು.
ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಜಿಲ್ಲೆಯ ವಿವಿಧ ಗ್ಯಾಸ್ ಏಜೆನ್ಸಿಗಳ ಮಾಲಕರು, ಸರಬರಾಜುದಾರರು ಮತ್ತಿತರರು ಉಪಸ್ಥಿತರಿದ್ದರು.
ಕಾಳಸಂತೆ ಮಾರಾಟ ವಿರುದ್ಧ ಎಚ್ಚರಿಕೆ
ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ, ಸಂಗ್ರಹಣೆ, ಶೇಖರಣೆ ಹಾಗೂ ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾಡಳಿತದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಎಚ್ಚರಿಸಿದರು.
ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನು, ಸಾಗಾಣಿಕೆ ಹಾಗೂ ರಿಫಿಲ್ಲಿಂಗ್ ಪ್ರಕರಣಗಳು ಕಂಡುಬಂದಲ್ಲಿ ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.







