ದೇಶದ ಸಮಗ್ರ ಬೆಳವಣಿಗೆಗೆ ಪೂರಕ ಬಜೆಟ್: ಶಾಸಕ ಸುನೀಲ್ ಕುಮಾರ್

ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕರ್ನಾಟಕವೂ ಸೇರಿದಂತೆ ದೇಶದ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಐಟಿ ನವೀನತೆ, ಪ್ರವಾಸೋದ್ಯಮ ವಿಸ್ತರಣೆ, ಒಳನಾಡು ಜಲ ಸಂಪರ್ಕ, ಹೈ-ಸ್ಪೀಡ್ ರೈಲು, ಎಂಎಸ್‌ಎಂಇಗಳು ಹಾಗೂ ಸೇವಾ ಕ್ಷೇತ್ರಗಳಿಗೆ ಒತ್ತು ನೀಡುವ ಮೂಲಕ, ಭವಿಷ್ಯಕ್ಕೆ ಸಿದ್ಧವಾದ ಕರ್ನಾಟಕದ ನಿರ್ಮಾಣಕ್ಕೆ ಈ ಬಜೆಟ್ ದೃಢವಾದ ನೆಲೆಯನ್ನು ಹಾಕಿದೆ.
ಅರ್ಥ ವ್ಯವಸ್ಥೆಯ ಸೂಕ್ಷ್ಮ ಸಂಗತಿಗಳಿಗೂ ಆದ್ಯತೆ ನೀಡುವ ಮೂಲಕ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ, ಎಂಎಸ್ ಎಂಇ, ಮೂಲ ಸೌಕರ್ಯ, ಆರ್ಥಿಕ ಕಾರಿಡಾರ್‌ಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ. ಪರಿಸರ ಸಮತೋಲನಕ್ಕಾಗಿ ವಿಶೇಷ ಆದ್ಯತೆ ನೀಡಿರುವುದು ಈ ಬಜೆಟ್ ಇನ್ನೊಂದು ವಿಶೇಷ. ಹವಾಮಾನ ವೈತರೀತ್ಯ ದಂಥ ಸಂಗತಿಗಳನ್ನೂ ಕೇಂದ್ರ ಸರ್ಕಾರ ಸೂಕ್ಷ್ಮ ವಾಗಿ ಗಮನಿಸುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಭಾರತವನ್ನು ಐದು ಟ್ರಿಲಿಯನ್ ಅರ್ಥವ್ಯವಸ್ಥೆಯನ್ನಾಗಿ ರೂಪಿಸುವಲ್ಲಿ ಈ ಬಜೆಟ್ ಅತ್ಯಂತ ಮಹತ್ವದ್ದಾಗಿದೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.





