ಉಡುಪಿ: ತನುಶ್ರೀ ಪಿತ್ರೋಡಿಯಿಂದ ಎರಡನೆ ಗಿನ್ನೆಸ್ ದಾಖಲೆಗೆ ಪ್ರಯತ್ನ

ಉಡುಪಿ, ಜು.21: ವಿಶ್ವದಾಖಲೆಯ ಸರದಾರಿಣಿ ಯೋಗಬಾಲೆ ತನುಶ್ರೀ ಪಿತ್ರೋಡಿ ‘ಮೋಸ್ಟ್ ಬ್ಯಾಕ್ವರ್ಡ್ ಸ್ಟೆಪ್ಸ್ ಇನ್ ಒನ್ ಮಿನಿಟ್’ ಮೂಲಕ ಎರಡನೇ ಗಿನ್ನೆಸ್ ದಾಖಲೆಗೆ ಪ್ರಯತ್ನ ನಡೆಸಿದ್ದಾರೆ.
ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯ ಸಭಾಂಗಣದಲ್ಲಿ ಇಂದು ತನ್ನ ಸಹಪಾಠಿಗಳ ಮತ್ತು ಗುರುಗಳ ಸಮ್ಮುಖದಲ್ಲಿ ಈ ಗಿನ್ನೆಸ್ ದಾಖಲೆಯ ಪ್ರಯತ್ನ ಮಾಡಿದ್ದಾರೆ. ತನುಶ್ರೀ ಈವರೆಗೆ ಒಂದು ಗಿನ್ನೆಸ್ ಸೇರಿದಂತೆ ಒಟ್ಟು ಎಂಟು ವಿಶ್ವದಾಖಲೆಯನ್ನು ಮಾಡಿದ್ದು ಇದು 9ನೇ ವಿಶ್ವದಾಖಲೆಯ ಪ್ರಯತ್ನವಾಗಿದೆ.
ದೇಹದ ಹಿಂಭಾಗಕ್ಕೆ ಎರಡೂ ಕೈಗಳನ್ನು ಚಲಿಸಿ ಎರಡೂ ಕಾಲುಗಳನ್ನು ಸುತ್ತುವರಿದು ಮತ್ತೆ ಮುಂಭಾಗಕ್ಕೆ ಕೈಯ ಚಲನೆ ಮಾಡುವ ಭಂಗಿ ‘ಮೋಸ್ಟ್ ಬ್ಯಾಕ್ವರ್ಡ್ ಸ್ಟೆಪ್ಸ್ ಇನ್ ಒನ್ ಮಿನಿಟ್’ ಇದನ್ನು ಆಕೆ ಒಂದು ನಿಮಿಷದಲ್ಲಿ 53 ಬಾರಿ ಮಾಡಿದ್ದಾರೆ.
ಈ ಹಿಂದಿನ ದಾಖಲೆ ಒಂದು ನಿಮಿಷದಲ್ಲಿ 48 ಬಾರಿ ಇದ್ದು ತನುಶ್ರೀ ಆ ದಾಖಲೆಯನ್ನು ಮುರಿದಿದ್ದಾರೆ. ಇನ್ನು ಗಿನ್ನೆಸ್ ದಾಖಲೆಯ ಸಂಸ್ಥೆ ಅದನ್ನು ಪರಿಶೀಲಿಸಿ ಬಳಿಕ ಅರ್ಹತಾ ಪತ್ರ ನೀಡಲಿದೆ. ಈ ಸಂದರ್ಭದಲ್ಲಿ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯ ವಿಭಾ ಸಿಸ್ಟರ್, ಪ್ರೀತಿ ಕ್ರಾಸ್ತಾ, ನಾಟ್ಯ ಗುರು ರಾಮಕೃಷ್ಣ ಕೊಡಂಚ, ಇಂದ್ರಾಳಿ ಜಯಕರ್ ಶೆಟ್ಟಿ, ನಗರಸಭಾ ಸದಸ್ಯೆ ಲಕ್ಷ್ಮೀ ಭಟ್, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.