ಕೊಂಕಣ ರೈಲ್ವೆ: 2 ರೈಲಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿ

ಸಾಂದರ್ಭಿಕ ಚಿತ್ರ
ಉಡುಪಿ: ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಎರಡು ರೈಲುಗಳಿಗೆ ಪ್ರಯಾಣಿಕರ ಭಾರೀ ಬೇಡಿಕೆಯ ಹಿನ್ನೆಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ತಲಾ ಒಂದರಂತೆ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆಗೊಳಿಸಲು ಕೊಂಕಣ ರೈಲ್ವೆ ನಿಗಮ ನಿರ್ಧರಿಸಿದೆ.
ಕಾರವಾರ ಮತ್ತು ಬೆಂಗಳೂರು ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ (ರೈಲು ನಂ.16595/16596) ಒಂದು ಹೆಚ್ಚುವರಿ ಸ್ಲೀಪರ್ ಕೋಚ್ ಸೇರ್ಪಡೆಗೊಳ್ಳಲಿದೆ. ಇದು ಬೆಂಗಳೂರು ಕಡೆಯಿಂದ ಮಾ.31ರಿಂದ ಎಪ್ರಿಲ್ 13ರವರೆಗೆ ಹಾಗೂ ಕಾರವಾರ ಕಡೆಯಿಂದ ಎ.1ರಿಂದ 14ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪಂಚಗಂಗಾ ರೈಲು ಒಟ್ಟು 15 ಎಲ್ಎಚ್ಬಿ ಕೋಚ್ಗಳೊಂದಿಗೆ ಸಂಚರಿಸಲಿದೆ.
ಅದೇ ರೀತಿ ಕಾರವಾರ- ಮಡಗಾಂವ್ ಜಂಕ್ಷನ್- ಕಾರವಾರ ನಡುವೆ ಸಂಚರಿಸುವ (ರೈಲು ನಂ.01595/01596) ದೈನಂದಿನ ಎಕ್ಸ್ಪ್ರೆಸ್ ರೈಲಿಗೂ ಒಂದು ಹೆಚ್ಚುವರಿ ಸ್ಲೀಪರ್ ಕೋಚ್ ಸೇರ್ಪಡೆಗೊಳಿಸಲಾಗುವುದು. ಇದು ಕಾರವಾರ ಕಡೆಯಿಂದ ಎ.1ರಿಂದ 14ರವರೆಗೆ ಹಾಗೂ ಮಡಗಾಂವ್ ಕಡೆಯಿಂದ ಎ.1ರಿಂದ 14ರವರೆಗೆ ಹೆಚ್ಚುವರಿ ಕೋಚ್ನೊಂದಿಗೆ ಸಂಚರಿಸಲಿದೆ. ಈ ರೈಲು ಒಟ್ಟು 15 ಎಲ್ಎಚ್ಬಿ ಕೋಚ್ಗಳೊಂದಿಗೆ ಓಡಾಟ ನಡೆಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.





