ಅ.9ರಿಂದ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಪ್ರವೇಶಕ್ಕೆ ತಾತ್ಕಾಲಿಕ ತಡೆ

ಉಡುಪಿ, ಅ.7: ಕಾರ್ಕಳ ತಾಲೂಕು ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ಗೆ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶವನ್ನು ಅ.9ರಿಂದ ನವೆಂಬರ್ ತಿಂಗಳ ಕೊನೆಯವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಕಾರ್ಕಳ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.
ಈ ಥೀಮ್ ಪಾರ್ಕ್ ಕಳೆದ ಜನವರಿ 27ರಂದು ಉದ್ಘಾಟನೆಗೊಂಡು ಸಾರ್ವಜನಿಕರು ಹಾಗೂ ಪ್ರವಾಸಿಗರ ಭೇಟಿಗೆ ತೆರೆದು ಕೊಂಡಿತ್ತು. ಆದರೆ ಥೀಮ್ ಪಾರ್ಕ್‌ನ ಬಾಕಿ ಉಳಿದ ಕಾಮಗಾರಿಯಲ್ಲಿ ಪರಶುರಾಮ ಮೂರ್ತಿ ಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ ಹಾಗೂ ಮೂರ್ತಿಗೆ ತುಕ್ಕು ನಿರೋಧಕ ಲೇಪನದ ಮತ್ತು ಇತರ ಮುಕ್ತಾ ಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಸೆ.23ರವರೆಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಇದೀಗ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರದವರು ಇನ್ನಷ್ಟು ಕಾಲಾವಕಾಶವನ್ನು ಕೋರಿದ್ದು, ಅದರಂತೆ ಅ.9ರಿಂದ ನವೆಂಬರ್ ಕೊನೆಯವರೆಗೆ ಪರಶುರಾಮ ಥೀಮ್ ಪಾರ್ಕ್‌ಗೆ ಯಾವುದೇ ಸಾರ್ವಜನಿಕರ ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.





