ತೆಂಕ ಗ್ರಾಪಂ: ಅದಾನಿ ಫೌಂಡೇಶನ್ ನಿಂದ 20 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಪಡುಬಿದ್ರೆ, ನ.18: ಅದಾನಿ ಸಮೂಹದ ಅಂಗಸಂಸ್ಥೆಯಾದ ಅದಾನಿ ಪವರ್ ಲಿಮಿಟೆಡ್ - ಉಡುಪಿ ಉಷ್ಣ ವಿದ್ಯುತ್ ಸ್ಥಾವರವು ತನ್ನ ಸಿಎಸ್‌ಆರ್ ವಿಭಾಗದ ಅದಾನಿ ಫೌಂಡೇಶನ್ ಮೂಲಕ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಸಮುದಾಯ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿಪೂಜೆ ನೆರವೇರಿಸಲಾಯಿತು.
ತೆಂಕ ಗ್ರಾಪಂ ವ್ಯಾಪ್ತಿಯ ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ಸಮೀಪದ ರಸ್ತೆಯ ಅಭಿವೃದ್ಧಿ, ಸ್ಥಳೀಯ ಸ್ಮಶಾನ ಸಂಪರ್ಕ ರಸ್ತೆಯ ಅಭಿವೃದ್ಧಿ ಹಾಗೂ ಮಲ್ಲಿಕಾಡುನ ಸರಕಾರಿ ಶಾಲೆಯ ಸಮೀಪದ ರಸ್ತೆಯ ಅಭಿವೃದ್ಧಿ ಕಾಮಗಾರಿ ಗಳ ಭೂಮಿಪೂಜೆಯನ್ನು ಅದಾನಿ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ನೆರವೇರಿಸಿದರು.
ಬಳಿಕ ಮಾತನಾಡಿದ ಕಿಶೋರ್ ಆಳ್ವ, ಅದಾನಿ ಪವರ್ ಲಿಮಿಟೆಡ್ ವತಿಯಿಂದ ಸ್ಥಾವರದ ಸುತ್ತಮುತ್ತಲಿನ 7 ಗ್ರಾಪಂಗಳ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 22 ಕೋಟಿ ರೂ. ಮೊತ್ತದ ವಿಶೇಷ ಅನುದಾನವನ್ನು ಮೀಸಲಿಡಲಾಗಿದೆ. ಈ ಯೋಜನೆಯಡಿ ಈವರೆಗೆ ಸುಮಾರು 15 ಕೋಟಿ ವೆಚ್ಚದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ತೆಂಕ ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೆ ಪಂಚಾಯತ್‌ನ ವಾರ್ಷಿಕ ಕ್ರಿಯಾ ಯೋಜನೆಯಡಿ ಗುರುತಿಸಲಾದ ವಿವಿಧ ಅಗತ್ಯ ಕಾಮಗಾರಿಗಳನ್ನು ಆಧರಿಸಿ ಸುಮಾರು 2.18 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಅದಾನಿ ಫೌಂಡೇಶನ್ ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಗ್ರಾಪಂನ ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ 20 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ತೆಂಕ ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಗ್ರಾಪಂ ಮಾಜಿ ಸದಸ್ಯರಾದ ಅರುಣಾ ಕುಮಾರಿ, ಕಿಶೋರ್ ಕುಮಾರ್, ಬಾಲಚಂದ್ರ, ಮೊಗವೀರ ಸಭಾ ಅಧ್ಯಕ್ಷ ಲಿಂಗಪ್ಪ ಪುತ್ರನ್, ಸ್ಥಳೀಯರಾದ ದಾಮೋದರ ಸುವರ್ಣ, ಮೋಹನ್ ಸುವರ್ಣ, ಜಯೇಂದ್ರ ಪೂಜಾರಿ, ಮಾಧವ ಕೋಟಿಯನ್, ರಾಜೇಶ್ ಕೋಟಿಯನ್, ಮನ್ಸೂರ್, ಅದಾನಿ ಫೌಂಡೇಶನ್ ನ ಅನುದೀಪ್ ಉಪಸ್ಥಿತರಿದ್ದರು.






