ತೆಂಕನಿಡಿಯೂರು | ಸರಕಾರಿ ವಸತಿ ನಿವೇಶನಕ್ಕೆ ಗ್ರಾಪಂ ಹಂತದಲ್ಲೇ ಅನುಮತಿ : ಸತೀಶ್
ಉಡುಪಿ, ನ.12: ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರದ ವಸತಿ ನಿವೇಶನ ಪಡೆದವರು ಮನೆ ಕಟ್ಟಲು ಪಡುತಿದ್ದ ತೊಂದರೆ ಇದೀಗ ನಿವಾರಣೆಯಾಗಿದ್ದು, ಗ್ರಾಪಂ ಹಂತದಲ್ಲೇ ಅನುಮತಿ ನೀಡಲು ಅನುಮೋದನೆ ಸಿಕ್ಕಿದೆ ಎಂದು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಹಾಗೂ ತೆಂಕ ನಿಡಿಯೂರು ಗ್ರಾಪಂ ಸದಸ್ಯ ಸತೀಶ್ ನಾಯಕ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಸರಕಾರಿ ವಸತಿ ನಿವೇಶನದ ಹಕ್ಕುಪತ್ರ ಹೊಂದಿದ್ದವರು ಮನೆ ನಿರ್ಮಿಸಲು ಉಡುಪಿ ನಗರಾಭಿವೃದ್ಧಿ ಪ್ರಾದಿಕಾರದಿಂದ ಪ್ರಾರಂಭಿಕ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಪ್ರಾಧಿಕಾರ ಪ್ರಾರಂಭಿಕ ಪ್ರಮಾಣ ಪತ್ರ ನೀಡಲು ಬರುವುದಿಲ್ಲ ಎಂದು ಹಿಂಬರಹ ನೀಡುತಿದ್ದುದರಿಂದ ಗ್ರಾಮೀಣ ಜನತೆಗೆ ಮನೆ ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದವರು ವಿವರಿಸಿದರು.
ಈ ವಿಷಯವನ್ನು ಗ್ರಾಮೀಣ ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ ಚರ್ಚಿಸಿ, ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಆಡಳಿತ ಸಮಿತಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾದಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅವರು ಗ್ರಾಪಂನ ಪಿಡಿಓಗೆ ಪಂಚಾಯತ್ ಹಂತದಲ್ಲೇ ನಿಯಮಾನುಸಾ ಕ್ರಮಕೈಗೊಳ್ಳುವಂತೆ ಸೂಚಿಸಿ ಅ.29ರಂದು ಅನುಮತಿ ಪತ್ರ ಬರೆದಿದ್ದಾರೆ ಎಂದು ಸತೀಶ್ ನಾಯಕ್ ತಿಳಿಸಿದರು.
ಇದರಿಂದ ಇನ್ನು ಮುಂದೆ ನಿವೇಶನದ ಏಕವಿನ್ಯಾಸ ನಕ್ಷೆ ಪಂಚಾಯತ್ ಮೂಲಕವೇ ಲಭ್ಯವಾಗಲಿದೆ. ಆದರೆ ಕೆಲವೊಬ್ಬರು ತಮ್ಮಿಂದಲೇ ಸಮಸ್ಯೆ ಪರಿಹಾರವಾಗಿದೆ ಎಂದು ನಾಟಕವಾಡುತಿದ್ದು, ಇದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳದಂತೆ ಅವರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಶೋಭಾ ಡಿ.ನಾಯ್ಕ್, ಸದಸ್ಯರಾದ ಶರತ್ ಶೆಟ್ಟಿ, ವೆಂಕಟೇಶ್ ಕುಲಾಲ್, ಪ್ರಖ್ಯಾತ ಶೆಟ್ಟಿ, ರಾಜೇಶ್ ಕರ್ಕೇರ ಮುಂತಾದವರು ಉಪಸ್ಥಿತರಿದ್ದರು.







