‘ನನ್ನ ಪತಿಯ ರಕ್ತ ಚೆಲ್ಲಿದವರ ರಕ್ತವೂ ಚೆಲ್ಲಬೇಕು’ ಡೇವಿಡ್ ಡಿಸೋಜರ ಪತ್ನಿ ಪ್ರಿಯಾ ಡೇವಿಡ್ ಹೇಳಿಕೆ

ಉಡುಪಿ, ಆ.8: ‘ನನ್ನ ಪತಿಗೆ ಉದ್ಯಮದಲ್ಲಿ ಸಾಕಷ್ಟು ಅಪಾಯ ಇತ್ತು. ಅವರಿಗೆ ಹೊರಗಿನಿಂದ ಸಾಕಷ್ಟು ಹಣ ಬರಲು ಬಾಕಿ ಇತ್ತು. ನನ್ನ ಪತಿಯನ್ನು ಕೊಂದವರಿಗೆ ಹಾಗೂ ಅದರ ಹಿಂದೆ ಸಂಚು ರೂಪಿಸಿದವರಿಗೂ ಕಠಿಣ ಶಿಕ್ಷೆಯಾಗಬೇಕು. ಪತಿಯ ರಕ್ತ ಚೆಲ್ಲಿದಂತೆ ಅವರ ರಕ್ತವೂ ಚೆಲ್ಲಬೇಕು’ ಎಂದು ಮೃತ ಡೇವಿಡ್ ಡಿಸೋಜರ ಪತ್ನಿ ಪ್ರಿಯಾ ಡೇವಿಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುದರಂಗಡಿಯ ಪಿಲಾರಿನಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ಹೊತ್ತಿಗೆ ಅವರು ಮನೆಯಲ್ಲಿಯೇ ಇದ್ದು ಊಟ ಮಾಡಿ ಮಧ್ಯಾಹ್ನ 2ಗಂಟೆಗೆ ಮುದರಂಗಡಿಯಲ್ಲಿ ರುವ ಮತ್ತೊಂದು ಕಚೇರಿಗೆ ಹೊರಟಿದ್ದರು. ಪ್ರತಿದಿನ 3.30- 4ಗಂಟೆಗೆ ಅವರು ಕಚೇರಿಯಿಂದ ಸೈಟ್‌ಗೆ ಹೋಗುತ್ತಾರೆ. ಅಲ್ಲಿಂದ ಸಂಜೆ 6.30ಕ್ಕೆ ಮನೆಗೆ ಮರಳುತ್ತಾರೆ ಎಂದರು.
ನಾನು ಮನೆಯಲ್ಲಿರುವಾಗ ಮಗ ಕರೆ ಮಾಡಿ ದುರ್ಘಟನೆಯ ವಿಚಾರ ತಿಳಿಸಿದ. ನಾನು ಕೂಡಲೇ ಅಲ್ಲಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದರು. ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದು ನೆಮ್ಮದಿ ತಂದಿದೆ ಎಂದು ಅವರು ಹೇಳಿದರು.
ನನ್ನ ಪತಿ ಉದ್ಯಮಿಯಾಗಿ ರಾಜಕಾರಣಿಯಾಗಿ ಊರಿನ ಅಭಿವೃದ್ಧಿಗೆ ಅಪಾರ ಶ್ರಮಿಸಿದ್ದಾರೆ. ಕುಟುಂಬಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ. ಊರಿನವರಿಗೆ, ಬಡವರಿಗೆ ತುಂಬಾ ನೆರವು ನೀಡುತ್ತಿದ್ದರು ಎಂದು ಅವರು ತಿಳಿಸಿದರು.






