ಜನರಿದ್ದಲ್ಲಿಗೆ ತೆರಳಿ ಸಮಸ್ಯೆಗಳ ಪರಿಹಾರ ಸರಕಾರದ ಉದ್ದೇಶ: ಸಚಿವ ರಿಝ್ವಾನ್ ಅರ್ಷದ್
ಉಡುಪಿಯಲ್ಲಿ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟನೆ

ಉಡುಪಿ : ಜನರು ಸರಕಾರದ ಬಳಿಗೆ ಬರುವ ಬದಲು, ಸರಕಾರವೇ ಜನರಿದ್ದಲ್ಲಿ ತೆರಳಿ ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದು ‘ಪ್ರಜಾ ಸೇವಾ ಆಂದೋಲನ’ದ ಮೂಲಕ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರದ ಉದ್ದೇಶವಾಗಿದೆ. ಜನರ ಸಮಸ್ಯೆ ಹಾಗೂ ಅಹವಾಲುಗಳನ್ನು ಅವರಿರುವಲ್ಲಿಯೇ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲು ಸರಕಾರ ಬದ್ಧವಾಗಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಹೇಳಿದ್ದಾರೆ.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ, ಪ್ರಜಾಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಜಾಸೇವಾ ಆಂದೋಲನ’ ಸಭೆಗಳನ್ನು ರಾಜ್ಯದಾದ್ಯಂತ ಆಯೋಜಿಸುವ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡಲಾಗುತ್ತಿದೆ. ಸೆ. 5ರಂದು ವಿಜಯನಗರ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಜಾಸೇವೆ ಆಂದೋಲನ ಸಭೆಗೆ ಚಾಲನೆ ನೀಡಿದ್ದಾರೆ ಎಂದವರು ಹೇಳಿದರು.
ಸರಕಾರ ಹಾಗೂ ಜನರ ನಡುನ ಸಂಬಂಧ ಯಾವಾಗಲು ಗಟ್ಟಿಯಾಗಿರಬೇಕು. ಸರಕಾರ ಇರುವುದೇ ಜನರ ಸೇವೆ ಗಳನ್ನು ಮಾಡಲು. ಸರಕಾರದ ಸೇವೆ ಪಡೆಯಲು ಜನ ಕಚೇರಿಗಳಿಗೆ ವಾರ, ತಿಂಗಳುಗಟ್ಟಲೆ ಅಲೆಯುವ ಪರಿಸ್ಥಿತಿ ಯನ್ನು ತಪ್ಪಿಸಿ, ಅವರ ಅಹವಾಲುಗಳಿಗೆ ಸ್ಪಂದಿಸಲು ಪ್ರಜಾಸೇವೆ ಇಲಾಖೆಯ ಮೂಲಕ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರಗಳಂದು ಈ ಸಭೆ ರಾಜ್ಯಾದ್ಯಂತ ನಡೆಯಲಿದೆ ಎಂದರು.
ಜನರು ಯಾವ ಸಮಸ್ಯೆಗಳಿಂದ ಹೈರಾಣಗಿದ್ದಾರೆ, ಅವರ ಪರಿಸ್ಥಿತಿಯನ್ನು ಅರಿತು ಅದನ್ನು ಮೌಲ್ಯಮಾಪನ ಮಾಡಲು ಪಾಲಿಸಿ ತರುವುದೇ ಸರಕಾರದ ಕೆಲಸ. ಆಯಾ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಒಂದನೇ ಹಾಗೂ ಮೂರನೇ ಶನಿವಾರದಂದು ತಾಲೂಕು ಮಟ್ಟದಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರದಂದು ಹೋಬಳಿ ಮಟ್ಟದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಸೂಕ್ತ ಪರಿಹಾರವನ್ನು ಅವರಿರುವಲ್ಲಿಯೇ ಒದಗಿಸಲಾಗು ವುದು. ಪ್ರತಿ ಬುಧವಾರ ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿ ಗಳ ಸಮ್ಮುಖ ಅರ್ಜಿಗಳನ್ನು ಫಾಲೋಆಪ್ ಮಾಡಲಿದ್ದಾರೆ ಎಂದರು.
ವ್ಯವಸ್ಥಿತ ರೀತಿಯಲ್ಲಿ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು, ಅರ್ಜಿಯ ಸ್ಥಿತಿಗತಿಗಳ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿರುವುದು ನಮ್ಮ ಸರಕಾರದ ಜವಾಬ್ದಾರಿಯುತ ನಡವಳಿಕೆಯನ್ನು ತೋರಿಸುತ್ತದೆ. ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಲು, ಅವರ ಕಷ್ಟ, ಸಂಕಷ್ಟ ಕಡಿಮೆ ಮಾಡಲು ಈ ಸಭೆ ಪ್ರಯೋಜನಕಾರಿಯಾಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ಕರಾವಳಿ ಭಾಗದ ಅಭಿವೃದ್ಧಿಯ ಉದ್ದೇಶದಿಂದ ಇದೇ 18ರಂದು ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ, ವ್ಯವಹಾರ ಕ್ಷೇತ್ರ, ಉದ್ಯೋಗಾವಕಾಶ ಸೇರಿದಂತೆ ಒಟ್ಟಾರೆಯಾಗಿ ಕರಾವಳಿ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಪ್ರತಿಯೊಂದು ಇಲಾಖೆಗೂ ಚುರುಕು ಮುಟ್ಟಿಸಿ, ಅಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನೆನಪಿಸಲು ಈ ಪ್ರಜಾಸೇವೆ ಆಂದೋಲನ ಸಭೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಜನರ ಸಮಸ್ಯೆಗೆ ಪೂರಕವಾಗಿ ಪರಿಹಾರ ನೀಡುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಲಿ ಎಂದು ಶುಭಹಾರೈಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಮೊಟ್ಟ ಮೊದಲ ಪ್ರಜಾಸೇವಾ ಆಂದೋಲನ ಸಭೆಯನ್ನು ಆಯೋಜಿಸುತ್ತಿದ್ದು, ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಮನೆ ಬಾಗಿಲಿಗೂ ಸರಕಾರದ ಯೋಜನೆಯನ್ನು ಕೊಂಡೊಯ್ಯುವ ಪ್ರಯತ್ನ ಸರಕಾರ ಈ ಸಭೆಯ ಮೂಲಕ ಮಾಡುತ್ತಿದೆ. ಸಾರ್ವಜನಿಕರ ಅಹವಾಲು ಹಾಗೂ ಸಮಸ್ಯೆಗಳಿಗೆ ಕ್ಲಪ್ತ ಸಮಯದಲ್ಲಿ ಪರಿಹಾರ ಕೊಂಡುಕೊಳ್ಳಲು ಹಾಗೂ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಕೊಳ್ಳಬೇಕು ಎಂದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಡಿಎಫ್‌ಓ ರುಥೇನ್, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಸ್ವಾಗತಿಸಿ, ರೋಷನ್ ಕುಮಾರ್ ಶೆಟ್ಟಿ ನಿರೂಪಿಸಿದರು.






