ಕೊರಗ ಸಮುದಾಯ ಸಾಮಾಜಿಕವಾಗಿ ಸದೃಢಗೊಳ್ಳಬೇಕು: ಬಸವಮೂರ್ತಿ ಮಾದಾರ ಚೆನ್ನಟ್ಯ ಸ್ವಾಮೀಜಿ

ಉಡುಪಿ, ಡಿ.25: ಪ್ರಸ್ತುತ ಇರುವ ಸಮಾಜದಲ್ಲಿ ಅತ್ಯಂತ ಹಿಂದುಳಿ ದಿರುವ ಹಾಗೂ ಕಡು ಬಡತನದಿಂದ ಕೂಡಿರುವ ಕೊರಗ ಸಮುದಾಯ ವನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯವನ್ನು ಮಾಡಬೇಕಿದೆ. ಆಗ ಮಾತ್ರ ತಳಮಟ್ಟದಲ್ಲಿರುವ ಈ ಸಮುದಾಯ ಕೂಡ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಡಾ.ಶ್ರೀಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕರೆ ನೀಡಿದ್ದಾರೆ.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಡಾ. ಎಚ್.ಎಸ್. ಶೆಟ್ಟಿ ನೇತೃತ್ವ ದಲ್ಲಿ ಕುಂದಾಪುರ ತಾಲೂಕಿನ ಉಳ್ಳೂರು ಎಂಬಲ್ಲಿ ಕೊರಗ ಸಮುದಾಯದ 14 ಕುಟುಂಬಗಳಿಗೆ ನಿರ್ಮಿಸಿ ಕೊಟ್ಟ ಸುಸಜ್ಜಿತ 14 ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ತಮಗೆ ಡಾ.ಎಚ್.ಎಸ್.ಶೆಟ್ಟಿ ಅವರಲ್ಲಿ ಬಸವಾದಿ ಶರಣರ ವ್ಯಕ್ತಿತ್ವವೇ ಕಾಣುತ್ತದೆ ಎಂದ ಮಾದಾರ ಚೆನ್ನಯ ಸ್ವಾಮೀಜಿ, ಇಂದಿನ ದಿನಗಳಲ್ಲಿ ದೇಶದಲ್ಲಿ ಶ್ರೀರಾಮ, ಕೃಷ್ಣ, ಕನಕದಾಸರ ಹೆಸರು ಹೇಳಿ ಭಾಷಣ ಮಾಡುವವರು ಮಾತ್ರ ಕಾಣಿಸುತ್ತಾರೆ. ಆದರೆ ತಳ ಮಟ್ಟದವರ ಪರವಾಗಿ ಮಾತನಾಡುವವರು ಯಾರೂ ಇರಲಿಲ್ಲ. ಆದ್ದರಿಂದಲೇ ಆ ತಳ ವರ್ಗ ಸಮುದಾಯದ ಹಲವಾರು ಕುಟುಂಬಗಳು ಮತಾಂತರಕ್ಕೆ ತುತ್ತಾದವು ಎಂದು ಹೇಳಿದರು.
ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಆಶೀರ್ವಚನ ನೀಡಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಡಾ.ಎಚ್. ಎಸ್. ಶೆಟ್ಟಿ ಅವರು 28 ಮನೆಗಳನ್ನು ನಿರ್ಮಿಸಿ ಕೊರಗ ಸಮುದಾಯಕ್ಕೆ ಕೊಟ್ಟಿದ್ದಾರೆ. ಇನ್ನು 72 ಮನೆಗಳನ್ನು ನಿರ್ಮಿಸಿ ಕೊಡಲಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಪೇಜಾವರ ಶ್ರೀಗಳು, ನೀವು ರಾಮನ ಸೇವೆ ಮಾಡುವುದಾದರೆ ಕಡು ಬಡವನಿಗೆ ಮನೆ ಕಟ್ಟಿಕೊಡಿ ಎಂದು ಹೇಳಿದ ಏಕೈಕ ಮಾತಿಗೆ ಬದ್ದವಾಗಿ ಡಾ. ಶೆಟ್ಟಿ ಅವರು 100 ಮನೆಗಳನ್ನು ಕೊರಗ ಸಮುದಾಯಕ್ಕೆ ಕಟ್ಟಿ ಕೊಡುವ ಸಂಕಲ್ಪ ಮಾಡಿದ್ದಾರೆ. ಅದರಲ್ಲಿ 28 ಮನೆಗಳು ಸಾಕಾರಗೊಂಡಿವೆ ಎಂದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎಚ್. ಎಸ್. ಶೆಟ್ಟಿ ಮಾತನಾಡಿ, ನಾನು ದುಡಿದ ಸ್ವಲ್ಪ ಪ್ರಮಾಣವನ್ನು ಸಮಾಜಕ್ಕೆ ಕೊಡಬೇಕೆಂಬ ಕಾರಣಕ್ಕೆ 18 ವರ್ಷಗಳ ಹಿಂದೆ ಟ್ರಸ್ಟ್ ಆರಂಭಿಸಿದ್ದೆ. ಈ ಮೊದಲು ಅನ್ನ ದಾಸೋಹ, ವಿದ್ಯಾರ್ಥಿ ವೇತನ ಮಾತ್ರ ನೀಡುತ್ತಿದ್ದೆವು. ಪೇಜಾವರ ಶ್ರೀಗಳ ಮಾತಿನ ಪ್ರೇರಣೆಯಿಂದ 2 ವರ್ಷಗಳ ಹಿಂದೆ ಮನೆ ಕಟ್ಟಲು ಆರಂಭಿಸಿದ್ದೆವು. ಇನ್ನು ಉಳಿದ 2 ವರ್ಷದಲ್ಲಿ 72 ಮನೆಗಳನ್ನು ಕಟ್ಟಿ ಕೊಡುವ ಸಂಕಲ್ಪ ಮಾಡಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರ್ಯಕ್ರಮ ವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೈ.ಭರತ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆರ್ಕ್ಕಾ, 74 ಉಳ್ಳೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಶೆಟ್ಟಿ, ಉಳ್ಳೂರು ಶ್ರೀಬನಶಂಕರಿ ದೇವಾಲಯದ ಆಡಳಿತ ಮೋಕ್ತೇಸರ ಸಂಜೀವ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರವಾರದ ಪಹರೆ ವೇದಿಕೆ ಅಧ್ಯಕ್ಷ ನ್ಯಾಯವಾದಿ ನಾಗರಾಜ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
"ಒಂದಷ್ಟು ವರ್ಷಗಳ ಹಿಂದೆ ಕೊರಗ ಸಮುದಾಯ ಅತ್ಯಂತ ಆರೋಗ್ಯವಾಗಿತ್ತು. ಸಮುದಾಯದ ಜನರು ಗಟ್ಟಿಮುಟ್ಟಾಗಿದ್ದರು. ಆದರೆ ಪ್ರಸ್ತುತ ಸರಕಾರ ಸರಿಯಾದ ಪೌಷ್ಠಿಕಾಂಶಯುಕ್ತ ಆಹಾರ ನೀಡದ ಪರಿಣಾಮ ಹಾಗೂ ಇತರೆ ಕಾರಣಗಳಿಂದ ಇಡೀ ಕೊರಗ ಸಮುದಾಯ ಅನಾರೋಗ್ಯದಿಂದ ಬಳಲುತ್ತಿದೆ. ಅವರ ಜನಸಂಖ್ಯೆಯೂ ತೀವ್ರವಾಗಿ ಕುಸಿಯುತ್ತಿದೆ. ಹೀಗಾಗಿ ಕೊರಗ ಸಮುದಾಯದ ದೈಹಿಕ ಆರೋಗ್ಯದ ಕುರಿತಂತೆ ಕೇಂದ್ರ ಸರಕಾರ ಕೂಡಲೇ ಸಂಶೋಧನೆ ನಡೆಸಿ, ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳಬೇಕು".
-ಡಾ.ಎಚ್.ಎಸ್.ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್‌ನ ಅಧ್ಯಕ್ಷ.
ಕೊರಗರನ್ನು ನೇರ ನೇಮಕಾತಿ ಮಾಡಿಕೊಳ್ಳಿ: ಸುಶೀಲ ನಾಡ
ಕೊರಗ ಸಮುದಾಯ ಆರ್ಥಿಕವಾಗಿ ಬಹಳ ಹಿಂದುಳಿದಿದೆ. ಮೂಲ ನಿವಾಸಿಗಳಾದ ನಮಗೆ ಸರಕಾರಿ ನೌಕರಿಯೂ ಸಿಗುತ್ತಿಲ್ಲ. ನೇರ ನೇಮಕಾತಿಗೆ ಆಗ್ರಹಿಸಿ ನಾವು ಕಳೆದ 11 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಆದರೆ ಅದಕ್ಕೆ ಯಾರೂ ಸ್ಪಂಧಿಸುತ್ತಿಲ್ಲ ಎಂದು ಕರ್ನಾಟಕ ಮತ್ತು ಕೇರಳ ಕೊರಗಾಭಿವೃದ್ಧಿ ಸಂಸ್ಥೆಗಳ ಅಧ್ಯಕ್ಷೆ ಸುಶೀಲ ನಾಡ ತಿಳಿಸಿದರು.
ನಮ್ಮಲ್ಲಿ ವಿದ್ಯಾವಂತರಿದ್ದರೂ ನಮ್ಮನ್ನು ಅಸ್ಪೃಶತೆಯಿಂದ ಕಾಣುವ ಮನಸ್ಥಿತಿ ಇನ್ನೂ ದೂರವಾಗಿಲ್ಲ. ಹೀಗಾಗಿ ಆತ್ಮ ವಿಶ್ವಾಸದ ಕೊರತೆಯಿಂದ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ನಮಗೆ ನೇರ ನೇಮಕಾತಿ ಮಾಡಿ ಹುದ್ದೆ ಕೊಡಬೇಕು ಎಂದವರು ಆಗ್ರಹಿಸಿದರು.







