ನಾಗರಮಠ: ಅಕ್ರಮ ಮರಳುಗಾರಿಕೆಯ ಸ್ಥಳ ತನಿಖೆ ನಡೆಸಿದ ಲೋಕಾಯುಕ್ತ ನಿಯೋಜಿತ ಉನ್ನತಮಟ್ಟದ ತಜ್ಞರ ತಂಡ

ಉಡುಪಿ: ಬ್ರಹ್ಮಾವರ ತಾಲೂಕು ಬಾರಕೂರು ಸಮೀಪದ ಹೊಸಾಳ ಗ್ರಾಮದ ನಾಗರಮಠ ಎಂಬಲ್ಲಿ ಸೀತಾನದಿಯಲ್ಲಿ ನಡೆಯುತ್ತಿದ್ದ ಅವೈಜ್ಞಾನಿಕ ಹಾಗೂ ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ನಡೆಸಿದ ಸುಧೀರ್ಘ ಹೋರಾಟ, ಧರಣಿ, ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ಇದೀಗ ಫಲಪದ್ರವಾಗಿದ್ದು, ಪ್ರಕರಣದ ಸಮಗ್ರ ತನಿಖೆಗೆ ಹಾಗೂ ಕ್ರಮಕ್ಕೆ ಕರ್ನಾಟಕ ಲೋಕಾಯುಕ್ತ ಮುಂದಾಗಿದೆ.
ಅಕ್ರಮ ಹಾಗೂ ಅವೈಜ್ಞಾನಿಕ ಮರಳುಗಾರಿಕೆಯಿಂದ ಪರಿಸರದ ಮೇಲಾಗಿರುವ ಹಾನಿ, ಸರಕಾರಕ್ಕಾದ ಆರ್ಥಿಕ ನಷ್ಟ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದ ಪ್ರಮಾಣವನ್ನು ಕಂಡುಕೊಳ್ಳಲು ಲೋಕಾಯುಕ್ತರು ರಚಿಸಿದ ಬಹು ಇಲಾಖೆಗಳ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ತನಿಖಾ ತಂಡ ಇಂದು ಮರಳುಗಾರಿಕೆಯಿಂದ ತೊಂದರೆಗೊಳ ಗಾದ ನಾಗರಮಠ ಪರಿಸರಕ್ಕೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲನೆ ನಡೆಸಿತು.
ಈ ತನಿಖಾ ತಂಡದಲ್ಲಿ ಸುರತ್ಕಲ್ ಎನ್‌ಐಟಿಕೆಯ ಪರಿಸರ ಇಂಜಿನಿಯರ್ ಭೂವಿಜ್ಞಾನ ವಿಭಾಗದ ಮುಖ್ಯಸ್ಥರು ಅಲ್ಲದೇ ಅರಣ್ಯ, ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಯ ಅಧಿಕಾರಿಗಳು ಹಾಗೂ ಲೋಕಾಯುಕ್ತ ಪೊಲೀಸರು ಇದ್ದು, ಸುಮಾರು 15 ಮಂದಿಯ ತಂಡ ಗ್ರಾಮಸ್ಥರು ನೀಡಿದ ದೂರಿನಲ್ಲಿ ಪ್ರಸ್ತಾಪಗೊಂಡ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಾಗರಮಠ ಆಸುಪಾಸಿನ ಗ್ರಾಮಗಳ ಸಂತ್ರಸ್ಥರು, ಮಹಿಳೆಯರು ಹಾಗೂ ಮಕ್ಕಳು ಅಕ್ರಮ ಮರಳುಗಾರಿಕೆ ವಿರುದ್ಧ ನಡೆಸಿದ ಪ್ರತಿಭಟನೆ ಹಾಗೂ ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತದ ಆದೇಶದಂತೆ ಉಡುಪಿಯ ಲೋಕಾಯುಕ್ತ ಪೊಲೀಸರು ಸ್ಥಳ ತನಿಖೆ ಬಳಿಕ ನೀಡಿದ ವರದಿಯ ಆಧಾರದಲ್ಲಿ ಕಳೆದ ವಾರ ಮೇ 14ರಂದು ಬೆಂಗಳೂರಿನಲ್ಲಿ ಪ್ರಾಥಮಿಕ ವಿಚಾರಣೆ ನಡೆದಿದ್ದು, ಇದರಲ್ಲಿ ಉನ್ನತ ಮಟ್ಟದ ತನಿಖಾ ತಂಡವನ್ನು ಸಮಗ್ರ ಕಳುಹಿಸಿ ವರದಿ ಪಡೆಯಲು ನಿರ್ಧರಿಸಲಾಗಿತ್ತು.
ತನಿಖಾ ತಂಡದಲ್ಲಿ ಸುರತ್ಕಲ್ ಎನ್‌ಐಟಿಕೆಯ ಪರಿಸರ ವಿಭಾಗದ ಮುಖ್ಯಸ್ಥರು, ಭೂ ವಿಜ್ಞಾನ ವಿಭಾಗದ ಮುಖ್ಯಸ್ಥರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ, ಹಿರಿಯ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಕಾರ್ಯನಿರ್ವಾಹಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಉಡುಪಿ, ಸಹಾಯಕ ನಿರ್ದೇಶಕರು ಭೂ ದಾಖಲೆಗಳ ಇಲಾಖೆ, ಉಡುಪಿ ಮತ್ತು ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಲೋಕಾಯುಕ್ತ ಉಡುಪಿ ಇವರನ್ನು ನಿಯುಕ್ತಿ ಗೊಳಿಸಲಾಗಿತ್ತು.
ತಂಡ ಇಂದು ಬೆಳಗ್ಗೆ 10ಗಂಟೆಗೆ ನಾಗರಮಠಕ್ಕೆ ಆಗಮಿಸಿದ್ದು, ಇಬ್ಬರು ಗ್ರಾಮಸ್ಥರನ್ನು ಮಾತ್ರ ಸ್ಥಳ ತೋರಿಸಲು ತಂಡದೊಂದಿಗೆ ಕರೆದೊಯ್ದರು. ತಂಡ ನದಿ ದಡದಲ್ಲಿ ಮರಳುಗಾರಿಕೆ ನಡೆದ ಪ್ರದೇಶ, ದ್ವೀಪ ಪ್ರದೇಶ, ಮರಳು ಸಂಗ್ರಹಿಸಿದ ಸ್ಥಳ, ಡಂಪಿಂಗ್ ಯಾರ್ಡ್, ಕಿಂಡಿ ಅಣೆಕಟ್ಟು ಪ್ರದೇಶ, ಅಣೆಕಟ್ಟಿನ ಗುಣಮಟ್ಟ, ಅವೈಜ್ಞಾನಿಕ ಮರಳು ಗಾರಿಕೆಯಿಂದ ಜಲಜೀವನ್ ಮಿಷನ್‌ಗಾಗಿ ನಿರ್ಮಿಸಿದ ಬಾವಿಯ ನೀರು ಉಪ್ಪಾಗಿರುವುದನ್ನು ಪರಿಶೀಲಿಸಲು ನೀರಿನ ಸ್ಯಾಂಪಲ್, ಹೊಳೆ ನೀರಿನ ಸ್ಯಾಂಪಲ್‌ನ್ನು ಸಂಗ್ರಹಿಸಿದೆ.
ಅಲ್ಲದೇ ನದಿಯಲ್ಲಿ ನಿಗದಿತ ಆಳವನ್ನು ಮೀರಿ 15ರಿಂದ 20 ಅಡಿ ಆಳದಲ್ಲೂ ಮರಳುಗಾರಿಕೆ ನಡೆಸಿರುವುದನ್ನು ತಂಡ ಗುರುತಿಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಅಪರಾಹ್ನ 2ಗಂಟೆಯವರೆಗೆ ಆಸುಪಾಸಿನ ಸ್ಥಳಗಳಲ್ಲಿ ತಂಡ ಸಂಚರಿಸಿ ಮಾಹಿತಿಗಳನ್ನು ಕಲೆಹಾಕಿದೆ.
ತಜ್ಞರ ತಂಡ ಜೂನ್ 16ರೊಳಗೆ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ. ದೂರಿನಲ್ಲಿ ಆರೋಪಿಸಲಾದ ಉಲ್ಲಂಘನೆಗಳಿಗೆ ಸಂಬಂಧಿಸಿದ ಪ್ರತಿಯೊಂದು ಅಂಶವನ್ನು ಸಮಿತಿ ಪರಿಶೀಲಿಸಿ, ಅನುಪಾಲನಾ ವರದಿಯನ್ನು ಸಲ್ಲಿಸಬೇಕು. ಸಾಮಾನ್ಯ ಅವಲೋಕನಗಳಿಗೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಜಂಟಿ ವರದಿ ಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಆದರೂ ಅವರ ಪರಿಣಿತಿಯ ಆಧಾರದ ಮೇಲಿನ ವಿಶೇಷ ಅವಿಷ್ಕಾರಗಳಿಗೆ ಸಂಬಂಧಿಸಿದಂತೆ ಪ್ರತಿ ತಜ್ಞರು ತಮ್ಮ ಪ್ರತ್ಯೇಕ ವರದಿಯನ್ನು ನೀಡಬಹುದು. ಆದರೆ ಅಂತಹ ವರದಿಗಳನ್ನು ಜೂನ್ 16ರ ಒಳಗೆ ಲೋಕಾಯುಕ್ತರನ್ನು ತಲುಪಬೇಕು ಎಂದು ಸೂಚಿಸಲಾಗಿದೆ. ಜೂ.20ರಂದು ಪ್ರಕರಣದ ಮುಂದಿನ ವಿಚಾರಣೆಗೆ ದಿನ ನಿಗದಿ ಪಡಿಸಲಾಗಿದೆ.
ಇಂದು ಭೇಟಿ ನೀಡಿದ ತಂಡದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್, ಲೋಕಾಯುಕ್ತ ವೃತ್ತ ನಿರೀಕ್ಷಕ ಮಂಜುನಾಥ್, ಎಡಿಎಲ್‌ಆರ್ ತಿಪ್ಪೆರಾಯ ತೊರವಿ, ಸಣ್ಣ ನೀರಾವರಿ ಇಲಾಖೆಯ ರಾಜುದ್ದೀನ್, ಅರಣ್ಯ ಇಲಾಖೆಯ ಶ್ರೀಧರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಕೀರ್ತಿಕುಮಾರ್, ಸುರತ್ಕಲ್ ಎನ್‌ಐಟಿಕೆಯ ವಿಷಯ ತಜ್ಞರು ಉಪಸ್ಥಿತರಿದ್ದರು.
"ಕಳೆದ ವಾರ ಬೆಂಗಳೂರಿನಲ್ಲಿ ನಡೆಸಿದ ವಿಚಾರಣೆಯ ವೇಳೆ ಉಡುಪಿ ಜಿಲ್ಲೆಯಲ್ಲಿ ನಡೆದಿರುವ ದೊಡ್ಡಮಟ್ಟದ ಅಕ್ರಮ ಮರಳುಗಾರಿಕೆಯ ಕುರಿತಂತೆ ವಿಸ್ತೃತ ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತ ಆದೇಶ ನೀಡಿದೆ. ಪ್ರಾಥಮಿಕ ವಿಚಾರಣೆಯ ವೇಳೆ ಅಕ್ರಮ ಮರಳುಗಾರಿಕೆಯಲ್ಲಿ ಗಂಭೀರ ಸ್ವರೂಪದ ಪರಿಸರ ಮಾಲಿನ್ಯ, ಪರಿಸರ ಕಾನೂನುಗಳ ಉಲ್ಲಂಘನೆ ಹಾಗೂ ಮರಳುಗಾರಿಕಾ ಚಟುವಟಿಕೆಗಳ ಮೇಲೆ ನಿಗಾ ವಹಿಸುವಲ್ಲಿ ದೊಡ್ಡ ಮಟ್ಟದ ಆಡಳಿತಾತ್ಮಕ ಲೋಪಗಳು ಕಂಡುಬಂದಿದ್ದು ಜಿಲ್ಲಾಧಿಕಾರಿ ಹಾಗೂ ಹಿರಿಯ ಭೂವಿಜ್ಞಾನಿಗಳ ಕುರಿತಂತೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ".
-ಕೆ.ಸಿ.ಶೆಟ್ಟಿ, ಗ್ರಾಮಸ್ಥರ ಪರ ಭಾಗವಹಿಸಿದ ನ್ಯಾಯವಾದಿ.






