ಸಹಕಾರಿ ಕ್ಷೇತ್ರದ ಸುಧಾರಣೆಯಲ್ಲಿ ಸಹಕಾರ ಭಾರತಿ ಪಾತ್ರ ಮಹತ್ವವಾದುದು: ಕೆ. ಪಿ .ಸುಚರಿತ ಶೆಟ್ಟಿ

ಕಾರ್ಕಳ: ಕಳೆದ ನಾಲ್ಕು ದಶಕಗಳಿಂದ ಸಹಕಾರಿ ಕ್ಷೇತ್ರದ ಶುದ್ಧೀಕರಣ, ವ್ರದ್ಧೀಕರಣ ಮತ್ತು ಆಧುನಿಕರಣದ ಧ್ಯೇಯವನ್ನು ಇಟ್ಟುಕೊಂಡು ಸಹಕಾರ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುವಲ್ಲಿ ಸಹಕಾರ ಭಾರತಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಪ್ರತ್ಯೇಕವಾದ ಕೇಂದ್ರ ಸಹಕಾರ ಸಚಿವಾಲಯದ ರಚನೆಯ ಜೊತೆಗೆ, ಕೇಂದ್ರ ಗೃಹ ಸಚಿವ ಅಮಿಷರವರನ್ನೇ ಸಹಕಾರ ಸಚಿವರನ್ನಾಗಿ ಮಾಡಿರುವುದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಹಕಾರ ಕ್ಷೇತ್ರದ ಮೇಲೆ ಇಟ್ಟಿರುವ ನಂಬಿಕೆ ಬರವಸೆಯನ್ನು ಎತ್ತಿ ತೋರಿಸುತ್ತದೆ ಎಂದು ಕೆ. ಪಿ .ಸುಚರಿತ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಹೆಬ್ರಿ ತಾಲೂಕಿನ ನೂತನ ಸಹಕಾರ ಭಾರತಿ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ತಂಡ ನಿರಂತರ ಕ್ರಿಯಾಶೀಲತೆ ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಗ್ರಾಮೀಣ ಭಾಗದ ಸಹಕಾರಿ ಬಂಧುಗಳ ನಿರಂತರ ಸಂಪರ್ಕವನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.
ಅವರು ಹೆಬ್ರಿ ತಾಲೂಕಿನ ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಜರುಗಿದ ಹೆಬ್ರಿ ತಾಲೂಕು ಸಹಕಾರ ಭಾರತಿ" ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಮತ್ತು ಮಾಹಿತಿ ಶಿಬಿರ "ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವ ಉದ್ಯಮಿ ಹಾಗೂ ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಲಕ್ಷ್ಮಮಿ ನಾರಾಯಣ ನಾಯಕರವರು ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಸ್ಥೆಗಳನ್ನ ನಿರ್ವಹಣೆ ಮಾಡಲು ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಅಗತ್ಯವಿದ್ದು, ಸಹಕಾರ ಭಾರತಿಯು ಸಂಘಟನಾತ್ಮಕವಾಗಿ ಈ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಾಹಿತಿ ಕಾರ್ಯಾಗಾರ
ಉದ್ಘಾಟನಾ ಸಮಾರಂಭದ ಬಳಿಕ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖರಾದ ಮೋಹನ್ ಕುಂಬಳೇಕರ್ರವರು ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಸಹಕಾರಿ ಕಾಯ್ದೆ ಮತ್ತು ಆಡಳಿತ ನಿರ್ವಹಣೆಯ ಬಗ್ಗೆ ಮೂಡಬಿದ್ರೆಯ ಸಹಕಾರಿ ಆಡಳಿತ ವಿದ್ಯಾಲಯದ ಪ್ರಾಂಶುಪಾಲರಾದ ಡಾ ಎಂ ವಿಶ್ವೇಶ್ವರಯ್ಯ ನವರು ರವರು ಮಾಹಿತಿ ಮಾರ್ಗದರ್ಶನ ನೀಡಿ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರಗಳು ಮತ್ತು ಕಾರ್ಯದರ್ಶಿಗಳ ಜೊತೆಗೆ ನೇರ ಸಂವಾದ ನಡೆಸಿದರು.
ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ :
ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿಯವರು ಹೆಬ್ರಿ ತಾಲ್ಲೂಕು ಸಹಕಾರ ಭಾರತೀಯ ನೂತನ ಅಧ್ಯಕ್ಷರಾದ ಪ್ರಗತಿಪರ ಯುವ ಕೃಷಿಕ ರಾಜೇಶ್ ಪೂಜಾರಿ ಯವರಿಗೆ ಸಹಕಾರಿ ಶಾಲನ್ನು ತೊಡಿಸುವುದರ ಮೂಲಕ ನೂತನ ಅಧ್ಯಕ್ಷರಾಗಿ ಘೋಷಣೆ ಮಾಡಿದರು.
ಪ್ರಧಾನ ಕಾರ್ಯದರ್ಶಿಗಳಾಗಿ ಮಂಡಾಡಿಜಡ್ಡು ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಜಯ ಹೆಬ್ಬಾರ್ , ಉಪಾಧ್ಯಕ್ಷರಾಗಿ ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾದ ಸುಬ್ರಮಣ್ಯ ಪ್ರಭು ಹಾಗೂ ಮಂಡಾಡಿಜಡ್ಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ , ಜೊತೆ ಕಾರ್ಯದರ್ಶಿಯಾಗಿ ಕನ್ಯಾನ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರುಣ್ ಶೆಟ್ಟಿ, ಮಹಿಳಾ ಪ್ರಮುಖರಾಗಿ ಮಾತಿಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ವರಂಗ ಗ್ರಾಮ ಪಂಚಾಯಿತನ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಉಷಾ ಹೆಬ್ಬಾರ್, ಹಾಲು ಪ್ರಕೋಷ್ಟದ ಸಂಚಾಲಕರಾಗಿ ಬಚ್ಚಪ್ಪು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ವಿಶ್ವನಾಥ ಹೆಗ್ಡೆಯವರಿಗೆ ಜವಾಬ್ದಾರಿಯನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಹಕಾರ ಭಾರತಿ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು, ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಸಹಕಾರ ಭಾರತಿ ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಕಳೆದ ಆರು ತಿಂಗಳುಗಳಿಂದ ಬಾಕಿ ಉಳಿದಿರುವ ಹೈನುಗಾರರ ಎಲ್ಲಾ ಪ್ರೋತ್ಸಾಹ ಧನವನ್ನು ಸರಕಾರ ಕೂಡಲೇ ಏಕಗಂಟಿನಲ್ಲಿಬಿಡುಗಡೆಗೊಳಿಸಬೇಕು ಹಾಗೂ ನಿರಂತರವಾಗಿ ಏರುತ್ತಿರುವ ಪಶು ಆಹಾರ ದರದಿಂದ ಆಗುತ್ತಿರುವ ಹೆಚ್ಚುವರಿ ಹೊರೆಯಿಂದ ಹೈನುಗಾರರಿಗೆ ಸಾಂತ್ವನ ನೀಡುವ ದೃಷ್ಟಿಯಿಂದ ಕನಿಷ್ಠ ಕೆ.ಜಿಗೆ ಐದು ರೂಪಾಯಿ ಸಬ್ಸಿಡಿ ನೀಡುವುದರ ಮೂಲಕ ಸರಕಾರ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿಯಾಗಿ ಪ್ರತಿಭಟನೆ_ ಹೋರಾಟವನ್ನು ಸಹಕಾರ ಭಾರತಿ ಮೂಲಕ ಕೈಗೊತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಹಕಾರ ಭಾರತಿ ಉಡುಪಿ ಜಿಲ್ಲಾ ಹಾಲು ಪ್ರಕೋಷ್ಟದ ಸಂಚಾಲಕರಾದ ಕನ್ನಾರು ಕಮಲಾಕ್ಷ ಹೆಬ್ಬಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಜಿತ್ ರವರು, ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾದ ರಾಜೇಶ್ ಪೂಜಾರಿಯವರು ಸ್ವಾಗತಿಸಿದರು.
ಅರುಣ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ನೂತನ ಪ್ರಧಾನ ಕಾರ್ಯದರ್ಶಿ ಸುಜಯ ಹೆಬ್ಬಾರ್ ರವರು ಧನ್ಯವಾದ ಸಮರ್ಪಿಸಿದರು.







