ವಿರೋಧ ಪಕ್ಷದ ವೈಫಲ್ಯದಿಂದ ಆಡಳಿತ ಪಕ್ಷಕ್ಕೆ ಲಾಭ: ಶಾಸಕ ಯತ್ನಾಳ್

ಕುಂದಾಪುರ, ಫೆ.13: ರಾಜ್ಯದಲ್ಲಿ ವಿರೋಧ ಪಕ್ಷದ ವೈಫಲ್ಯದ ಲಾಭವನ್ನು ಆಡಳಿತ ಪಕ್ಷ ಬಳಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯ ಸರಕಾರದ ವಿರುದ್ಧದ ಅಬಕಾರಿ ಹಗರಣದ ಅದರ ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ಅಬಕಾರಿ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನ್ನೇ ಆಡಿಲ್ಲ ಎಂದು ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಕ್ಷವನ್ನು ಕಟುವಾಗಿ ಟೀಕಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಂದಾಪುರಕ್ಕೆ ಆಗಮಿಸಿದ ಯತ್ನಾಳ್ ಇಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಅಬಕಾರಿ ಇಲಾಖೆಯ ಭ್ರಷ್ಟಾಚಾರವನ್ನು ವಿಪಕ್ಷ ಸರಿಯಾಗಿ ನಿಭಾಯಿಸಿಲ್ಲ ಎಂದವರು ಗಂಭೀರ ಆರೋಪ ಮಾಡಿದರು.
ವಿಜಯೇಂದ್ರ ಅವರು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿಲ್ಲ. ವಿಧಾನಸಭೆಯಲ್ಲೂ ಮಾತಾಡೋಲ್ಲ, ಬಹಿರಂಗವಾಗಿಯೂ ಮಾತನಾಡಲ್ಲ. ಸದನದಲ್ಲಿ ಕುಳಿತುಕೊಳ್ಳುತ್ತಿಲ್ಲ, ಚರ್ಚೆಯಲ್ಲೂ ಭಾಗವಹಿಸುತ್ತಿಲ್ಲ ಎಂದು ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೆರೆದರು.
ರಾಮ್‌ಜಿ ಬಗ್ಗೆ ರಾಜ್ಯ ಸರಕಾರ ಜನತೆಯಲ್ಲಿ ಮೂಡಿಸಿದ್ದ ತಪ್ಪು ಅಭಿಪ್ರಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹೋಗಲಾಡಿಸಲು ವಿಫಲರಾಗಿ ದ್ದಾರೆ. ಅವರಿಗೆ ಎಲ್ಲಿ ತಮ್ಮ ಫೈಲ್‌ಗಳನ್ನು ಹೊರ ತೆಗೆಯುತ್ತಾರೋ ಎಂಬ ಭಯ.ಈ ಭಯದಲ್ಲಿ ಸದನದಿಂದ ಓಡಿಹೋಗಿದ್ದಾರೆ ಎಂದು ಲೇವಡಿ ಮಾಡಿದ ಯತ್ನಾಳ್, ಸದನದಲ್ಲಿ ವಿರೋಧ ಪಕ್ಷದ ನಾಯರೇನೊ ಪ್ರಯತ್ನ ಮಾಡಿದ್ದಾರೆ ಎಂದು ಆಶೋಕರನ್ನು ಹೊಗಳಿದರು.
ಅರ್ಥಹೀನ ಅಧಿವೇಶನ: ರಾಜ್ಯ ವಿಧಾನಮಂಡಲದ ಈ ಬಾರಿಯ ಅಧಿವೇಶನವನ್ನು ಅರ್ಥಹೀನ ಅಧಿವೇಶನ ಎಂದು ಟೀಕಿಸಿದ ಯತ್ನಾಳ್, ಇದರಲ್ಲಿ ಜನರ ತೆರಿಗೆ ಹಣವನ್ನು ಹಾಳು ಮಾಡುವ ಕೆಲಸವಾಯಿತು ಎಂದರು.
ಇದು ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಅವರನ್ನು ಟೀಕಿಸಲು ಕರೆದ ಅಧಿವೇಶನ. ರಾಮ್‌ಜಿ ಬಗ್ಗೆ ಸರಿಯಾಗಿ ಚರ್ಚೆಯೇ ಆಗಿಲ್ಲ. ಶಾಸಕರ ಸಂಬಳ ಭತ್ಯೆಗಾಗಿ ನಡೆದ ಅಧಿವೇಶನ ಇದಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಅನಂತ್‌ಕುಮಾರ್ ಹೆಗಡೆ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಈ ಬಗ್ಗೆ ಹೆಗಡೆ ಎಲ್ಲೂ ವೈಯಕ್ತಿಕವಾಗಿ ಪ್ರತಿಕ್ರಿಯೆ ಕೊಟ್ಟಿಲ್ಲ. ಯಾವುದೇ ದೃಢವಾದ ಮಾಹಿತಿ ಇಲ್ಲ . ರಾಜ್ಯ ರಾಜಕಾರಣಕ್ಕೆ ಬರಲು ಮನಸ್ಸಿದ್ದರೆ ಅವರೇ ಬಹಿರಂಗ ಪಡಿಸಬೇಕು ಎಂದರು.
ಬಿಜೆಪಿಯಲ್ಲಿ ಒಳ್ಳೆಯ ನಾಯಕತ್ವವನ್ನು ಮುಗಿಸಲಾಗುತ್ತದೆ.ತಂದೆ-ಮಕ್ಕಳ ಸಹವಾಸದಿಂದ ಹೀಗೆ ಆಗಿದೆ. ಇಂಥವರಿಗೆ ನಾಯಕತ್ವ ನೀಡಬೇಕೇ ಎಂಬುದನ್ನು ಕೇಂದ್ರ ಸರಕಾರ ನಿರ್ಧರಿಸಬೇಕು.ಇವರದು ಹೊಂದಾಣಿಕೆಯ ರಾಜಕೀಯ ಎಂದು ಮತ್ತೆ ಟೀಕಿಸಿದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತಂತೆ ಮಾತನಾಡಿದ ಯತ್ನಾಳ್, ವಿದೇಶಕ್ಕೆ ಹೋಗಿ ಅವರು ಅಧ್ಯಯನ ಮಾಡುವುದು ಏನಿದೆ. ಬೇಕಿದ್ದರೆ ಭ್ರಷ್ಟಾಚಾರವನ್ನು ಹೇಗೆ ಕಡಿಮೆ ಮಾಡಬೇಕು ಎಂದು ಅಧ್ಯಯನ ಮಾಡಲಿ ಎಂದು ವ್ಯಂಗ್ಯವಾಡಿದರು. ಅವರು ಅಧ್ಯಯನಕ್ಕೆ ವಿದೇಶಕ್ಕೆ ಹೋಗಿಲ್ಲ, ಶಕ್ತಿಪ್ರದರ್ಶನಕ್ಕೆ ಹೋಗಿದ್ದಾರೆ. ನಮ್ಮ ಬಳಿ ಎಷ್ಟು ಶಾಸಕರ ಒಲವಿದೆ ಎಂದು ತೋರಿಸಲು ಹೋಗಿದ್ದಾರೆ ಎಂದರು.
ರಾಜ್ಯ ಸರಕಾರ ಪತನದ ಅಂಚಿಗೆ: ಯತ್ನಾಳ್
ಸಿದ್ಧರಾಮಯ್ಯ ನೇತೃತ್ವದ ಸರಕಾರ ಪತನವಾಗುವ ಹಂತಕ್ಕೆ ಬರುತ್ತೆ.ಡಿ.ಕೆ. ಶಿವಕುಮಾರ್ ಯಾವುದೇ ಪರಿಸ್ಥಿತಿ ಯಲ್ಲಿ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಸರಕಾರ ಬಿದ್ದರೂ ತೊಂದರೆ ಇಲ್ಲ ಎಂಬ ಹಂತಕ್ಕೆ ತಲುಪಿದ್ದಾರೆ. ಕಳೆದ ಎರಡು ಮೂರು ದಿನಗಳ ಹೇಳಿಕೆಯಲ್ಲಿ ಇದನ್ನು ಗಟ್ಟಿಯಾಗಿ ಮಾತನಾಡಿದ್ದಾರೆ.
ಹೊಸದಿಲ್ಲಿಗೆ ಗಾಳಿ ಬಿಸಿಲು ನೋಡಲು ಬಂದಿಲ್ಲ ಎಂದು ಅವರೇ ಹೇಳಿದ್ದಾರೆ. ಹೀಗಾಗಿ ಶೀಘ್ರವೇ ರಾಜ್ಯ ಸರಕಾರ ಪತನವಾದರೂ ಆಶ್ಚರ್ಯ ಇಲ್ಲ ಎಂದು ಬಸವನಗೌಡ ಯತ್ನಾಳ್ ನುಡಿದರು.






