ಸಾಲುಮರದ ತಿಮ್ಮಕ್ಕಗೂ ಉಡುಪಿಗೂ ಅವಿನಾಭಾವ ಸಂಬಂಧ !

ಉಡುಪಿ, ನ.14: ವಯೋ ಸಹಜತೆಯಿಂದ ಇಂದು ನಿಧನರಾದ ‘ವೃಕ್ಷಮಾತೆ’ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೂ ಮತ್ತು ಉಡುಪಿಗೂ ಅವಿನಾಭಾವ ಸಂಬಂಧ ಇದೆ. 2014ರಿಂದ ಈ ನಂಟು ತುಂಬಾ ಗಟ್ಟಿಯಾಗಿ ನೆಲೆಯೂರಿತ್ತು.
2014ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಲುಮರದ ತಿಮ್ಮಕ್ಕ, ಬಹಳ ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದ್ದರು. ಅವರನ್ನು ನೋಡಲು ಬೆಂಗಳೂರಿಗೆ ಹೋಗಿದ್ದ ಉಡುಪಿಯ ಅವಿನಾಶ್ ಕಾಮತ್ಗೆ ಈ ವಿಚಾರ ತಿಳಿಯಿತು. ಅದಕ್ಕೆ ಅವರು ಉಡುಪಿಯಲ್ಲಿ ಅಜ್ಜಿಯ ಆರೋಗ್ಯಕ್ಕೆ ಧನಸಹಾಯ ಮಾಡಬೇಕೆಂಬ ಉದ್ದೇಶದಿಂದ ‘ನೆರಳು- ನೆರವು’ ಅಭಿಯಾನವನ್ನು ನಡೆಸಿದರು.
ಈ ಅಭಿಯಾನದ ಮೂಲಕ ಸುಮಾರು 2,36,000ರೂ. ಮೊತ್ತವನ್ನು ಸಂಗ್ರಹಿಸಲಾಗಿತ್ತು. ಗುಣಮುಖರಾದ ಬಳಿಕ ತಿಮ್ಮಕ್ಕ ಅವರನ್ನು ಉಡುಪಿಗೆ ಕರೆಸಿ ಆ ಮೊತ್ತವನ್ನು ಅವರಿಗೆಯೇ ಹಸ್ತಾಂತರಿಸಲಾಗಿತ್ತು. ಅಲ್ಲಿಂದ ಸಾಲುಮರದ ತಿಮ್ಮಕ್ಕನವರಿಗೂ ನಮ್ಮ ಉಡುಪಿಗೂ ಅವಿನಾಭಾವ ಸಂಬಂಧ ಬೆಳೆಯಿತು.
ಆ ಬಳಿಕ ಅವರು ನಿರಂತರ ಉಡುಪಿಗೆ ಹಲವು ಬಾರಿ ಬಂದಿದ್ದರು. ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉದ್ಘಾಟನೆಯನ್ನು 2019ರಲ್ಲಿ ತಿಮ್ಮಕ್ಕ ಅವರು ಮಾಡಿದ್ದರು. ಪ್ರತಿಸಲ ಉಡುಪಿಗೆ ಬಂದಾಗ ತಿಮ್ಮಕ್ಕ ಗಿಡ ನೆಡುತ್ತಿದ್ದರು.
ಅಜ್ಜಿಯ ಕುರಿತ 24 ನಿಮಿಷದ ಸಾಕ್ಷಚಿತ್ರವನ್ನು ಉಡುಪಿಯ ರವಿರಾಜ್ ಎಚ್.ಪಿ. ಅವಿನಾಶ್ ಕಾಮತ್ ನಿರ್ಮಿಸಿದ್ದರು. ಇದನ್ನು ಅಂದಿನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಡುಗಡೆಗೊಳಿಸಿದ್ದರು. ಅದೇ ರೀತಿ ತಿಮ್ಮಕ್ಕ ಅವರ ಕುರಿತು ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ‘ನೆರಳನು ನೀಡುವ ಮರಕೇ ನರಳು ಸಾಲುಮರದ ತಿಮ್ಮಕ್ಕ’ ಎಂಬ ಹಾಡು ರಚಿಸಿದ್ದರು. ಆ ಹಾಡು ಇದೀಗ ಯೂಟ್ಯೂಬ್ ನಲ್ಲಿ ಲಭ್ಯವಿದೆ.
ಉಡುಪಿಯ ಬಡಗಬೆಟ್ಟು ಸೊಸೈಟಿ ಹಮ್ಮಿಕೊಂಡಿದ್ದ ಪರಿಸರ ಸಂಬಂಧ ಕಾರ್ಯಕ್ರಮಕ್ಕೆ ತಿಮ್ಮಕ್ಕ ಅವರೇ ಚಾಲನೆ ನೀಡಿದ್ದರು. ಅದೇ ಸಂದರ್ಭದಲ್ಲಿ ಶಾಲೆಯ ಮೆಟ್ಟಿಲನ್ನೇ ಹತ್ತದ ಸಾಲುಮರದ ತಿಮ್ಮಕ್ಕ ಅವರನ್ನು ಮಣಿಪಾಲ ಮಾಹೆ ವಿವಿಯವರು ಕರೆಸಿ ಸನ್ಮಾನಿಸಿರುವುದು ವಿಶೇಷ. ಅದೇ ರೀತಿ ಅವಿನಾಶ್ ಕಾಮತ್ ಅವರ ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆದಿದ್ದ ಹೆಜ್ಜೆ ಗುರುತು ಕಾರ್ಯಕ್ರಮದಲ್ಲಿ ತಿಮ್ಮಕ್ಕ ಅವರನ್ನು ಕರೆಸಿ ಅವರ ಬದುಕನ್ನು ಜನರ ಮುಂದೆ ಇಡಲಾಗಿತ್ತು.
ಹೀಗೆ ಸಾಲುಮರದ ತಿಮ್ಮಕ್ಕ ಹಾಗೂ ಉಡುಪಿಯ ಸಂಬಂಧದ ಬಗ್ಗೆ ಅವಿನಾಶ್ ಕಾಮತ್ ಹಾಗೂ ರವಿರಾಜ್ ಎಚ್.ಪಿ. ನೆನಪಿಸಿಕೊಂಡಿದ್ದಾರೆ.







