ಪರಿಶ್ರಮದಿಂದ ಗುರಿ ತಲುಪುವವನೆ ನಿಜವಾದ ಸ್ಟಾರ್: ಮುನವರ್ ಝಮಾ
ಮುಸ್ಲಿಮ್ ಒಕ್ಕೂಟದಿಂದ ವಿದ್ಯಾರ್ಥಿ-ಪೋಷಕರ ಸಮಾವೇಶ

ಉಡುಪಿ: ಮಾದಕ ದ್ರವ್ಯ, ಮದ್ಯ ಸೇವನೆ ಚಟದಿಂದ ತಾವು ನಾಶ ವಾಗುವುದಲ್ಲದೆ ತಮ್ಮ ಇಡೀ ಕುಟುಂಬವನ್ನೇ ಬಲಿ ಪಡೆದುಕೊಳ್ಳುತ್ತಾರೆ. ಈ ಮೂಲಕ ತಮ್ಮ ಇಡೀ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇದನ್ನು ತಡೆಯುವುದು ಪೊಲೀಸರು, ಪೊಷಕರು, ಧರ್ಮಗುರುಗಳು, ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಖ್ಯಾತ ವಾಗ್ಮಿ, ಪ್ರೇರಕಾ ಭಾಷಣಕಾರ ಮುನವರ್ ಝಮಾ ಹೈದರಬಾದ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿ ಮಿಷನ್ ಕಂಪೌಂಡ್‌ನ ಯುಬಿಎಂಸಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ‘ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳು’ ಎಂಬ ವಿಷಯದ ಕುರಿತ ವಿದ್ಯಾರ್ಥಿ- ಪೋಷಕರ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.
ತಮ್ಮ ಮಕ್ಕಳು ಯಾರ ಜೊತೆ ಸ್ನೇಹ ಬೆಳೆಸುತ್ತಾರೆ ಎಂಬುದರ ಬಗ್ಗೆ ಪೋಷಕರು ಹೆಚ್ಚು ಗಮನ ಕೊಡಬೇಕು. ಕೆಟ್ಟವರ ಸಹವಾಸದಿಂದ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಆದುದರಿಂದ ಮಕ್ಕಳು ಉತ್ತಮ ಗುಣ ನಡತೆಯ ಸ್ನೇಹಿತರ ಸ್ನೇಹ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ಕನಸು, ಆಸೆ, ನಿರ್ದೇಶನ, ಸಾಗುವ ದಾರಿಯನ್ನು ಸರಿಯಾಗಿ ನಿರ್ಧರಿಸಿದರೆ ಗುರಿ ತಲುಪಲು ಸಾಧ್ಯವಾಗುತ್ತದೆ. ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ಮಕ್ಕಳು ಗಳಿಸುವ ಅಂಕಗಳಿಗಿಂತ ಅವರ ಗುಣ ನಡತೆ ಮುಖ್ಯವಾಗಿರುತ್ತದೆ. ಟೀಕೆಗಳಿಗೆ ನಾವು ಎಂದೂ ಹೆದರಬಾರದು ಎಂದು ಅವರು ತಿಳಿಸಿದರು.
ಸಾಧನೆ ಮತ್ತು ಯಶಸ್ಸು ಎರಡು ಒಂದೇ ಅಲ್ಲ. ಸಮುದಾಯದ ಒಳಿತು ಬಯಸದೆ ಮಾಡಿದ ಸಾಧನೆಯು ಯಶಸ್ಸು ಆಗಲು ಸಾಧ್ಯವಿಲ್ಲ. ಗುರಿಯನ್ನು ಸವಾಲಾಗಿ ಪರಿಗಣಿಸಿ ಬಹಳಷ್ಟು ಪರಿಶ್ರಮದಿಂದ ತಲುಪುವವರೇ ನಿಜವಾದ ಸ್ಟಾರ್ ಆಗುತ್ತಾರೆ. ಗುರಿಯ ಬಗ್ಗೆ ಏಕಾಗ್ರತೆ ಮತ್ತು ಗಮನ ಕೇಂದ್ರಿಕರಿಸದಿದ್ದರೆ ನಮ್ಮ ಕನಸು ನೆರವೇರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಚಿಂತಕ ಬೆಂಗಳೂರಿನ ಡಾ.ತಾಹ ಮತೀನ್ ಮಾತನಾಡಿ, ಬದುಕಿನಲ್ಲಿ ನೈತಿಕ ಮೌಲ್ಯಗಳು ಮುಖ್ಯವೇ ಹೊರತು ಹಣ ಅಲ್ಲ. ಆದರೆ ಇಂದು ಹಣಕ್ಕಾಗಿ ನೈತಿಕ ಮೌಲ್ಯವನ್ನೇ ಜನ ಮರೆಯುತ್ತಿದ್ದಾರೆ. ಹಣ ಮುಂದೆ ನೈತಿಕ ಮೌಲ್ಯಗಳು ನಗಣ್ಯ ವಾಗಿದೆ. ಆದುದರಿಂದ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಯನ್ನು ಅರಿತು ನೈತಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಮಾತನಾಡಿ, ವಿದ್ಯಾರ್ಥಿಗಳು ಮಾದಕ ದ್ರವ್ಯ, ಪ್ರೀತಿಯ ಬಲೆಗೆ ಬಿದ್ದು ತಮ್ಮ ಭವಿಷ್ಯವನ್ನು ನರಕಸದೃಶ್ಯವನ್ನಾಗಿ ಮಾಡುತ್ತಿದ್ದಾರೆ. ಮಕ್ಕಳಲ್ಲಿ ನೈತಿಕ ಮೌಲ್ಯ ಗಳನ್ನು ಬೆಳೆಸುವ ಬಗ್ಗೆ ಪೋಷಕರು ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು. ಶೈಕ್ಷಣಿಕ ಬದುಕಿನಲ್ಲಿ ನೈತಿಕ ಮೌಲ್ಯವನ್ನು ಎತ್ತಿ ಹಿಡಿಯ ಬೇಕು ಎಂದು ಅಭಿಪ್ರಾಯ ಪಟ್ಟರು.
ಕೆಲವರು ಒಡೆದು ಆಳುವ ನೀತಿ ಮಾಡಿದರೆ ನಮ್ಮ ವಿದ್ಯಾರ್ಥಿಗಳು ಕೂಡಿ ಬಾಳುವ ನೀತಿಯನ್ನು ಅನುಸರಿಸಬೇಕು. ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಿಭಜಿಸುವವರಿಗೆ ಅವಕಾಶ ಮಾಡಿಕೊಡಬಾರದು. ಈ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಪ್ರೀತಿಯನ್ನು ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡ ಬೇಕು ಎಂದು ಅವರು ಹೇಳಿದರು.
ಮೂಳೂರು ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಮೌಲಾನ ಮುಸ್ತಾಫ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಸ್ಲಾಮ್ ಧರ್ಮ ಶಿಕ್ಷಣಕ್ಕೆ ಬಹಳಷ್ಟು ಮಹತ್ವ ನೀಡಿದೆ. ವಿದ್ಯಾವಂತರಿಗೆ ಇಸ್ಲಾಮ್‌ನಲ್ಲಿ ಅತ್ಯುತ್ತಮವಾದ ಸ್ಥಾನ ಇದೆ. ಆದುದರಿಂದ ಸಮುದಾಯದ ವಿದ್ಯಾರ್ಥಿಗಳು ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣ ಪಡೆಯಬೇಕು. ಇದರಿಂದ ಸಮುದಾಯ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಿದೆ ಎಂದರು.
ವಿದ್ಯಾರ್ಥಿ ಅಕ್ಮಲ್ ಉಸ್ತಾದ್ ಕಿರಾತ್ ಪಠಿಸಿದರು. ಹನಾ, ಅರ್ಫತ್, ಸುನೈನಾ ಅನುವಾದಿಸಿದರು. ಡಾ.ಅಬ್ದುಲ್ ಅಝೀಝ್ ಮಣಿಪಾಲ ಸ್ವಾಗತಿಸಿದರು. ಮೌಲಾನ ಜಮೀರ್ ಅಹ್ಮದ್ ರಶದಿ ಮುಖ್ಯ ಭಾಷಣಕಾರರ ಪರಿಚಯ ಮಾಡಿ ದರು. ಶೇಕ್ ಅಬ್ದುಲ್ ಲತೀಫ್ ಮದನಿ ವಂದಿಸಿದರು. ಜಮಾಲುದ್ದೀನ್ ಹಿಂದಿ ಕಾರ್ಯಕ್ರಮ ನಿರೂಪಿಸಿದರು.







