ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕಳ್ಳತನ: ಲಕ್ಷಾಂತರ ರೂ. ಮೌಲ್ಯದ ನಗನಗದು ಸಹಿತ ಸೊತ್ತು ಕಳವು

ಕಾಪು, ಜ.30: ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆ ಸಮೀಪದ ಮನೆಗೆ ಜ.29ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದಿವಾಕರ ಶೆಟ್ಟಿ ಕುಟುಂಬ ಸಮೇತರಾಗಿ ಶುಭ ಕಾರ್ಯಕ್ಕಾಗಿ ಮುಂಬಯಿಗೆ ತೆರಳಿದ್ದರು. ಮಧ್ಯರಾತ್ರಿಯ ನಂತರ ಮನೆಯ ಮುಖ್ಯ ದ್ವಾರದ ದಾರಂದ ಮುರಿದು ಒಳ ನುಗ್ಗಿದ ಕಳ್ಳರು, ಮನೆಯನ್ನು ಜಾಲಾಡಿದ್ದಾರೆ. ಮನೆಯ ಸಿಸಿ ಕೆಮೆರಾದ ದಿಕ್ಕನ್ನು ಬದಲಿಸಿ, ಕೃತ್ಯ ಎಸಗಿರುವ ಕಳ್ಳರು ಡಿವಿಆರ್ ಅನ್ನು ಕೊಂಡೊಯ್ದಿದ್ದಾರೆ.
ಕಪಾಟಿನಲ್ಲಿದ್ದ ಸುಮಾರು 30ಗ್ರಾಂ ಚಿನ್ನಾಭರಣ, ಸುಮಾರು 9 ಲಕ್ಷ ರೂ ನಗದು, ಬೆಳ್ಳಿಯ ತಂಬಿಗೆಗಳು, 3 ಲಕ್ಷ ರೂ. ಮೌಲ್ಯದ 3 ವಾಚ್ ಗಳು, ಸುಮಾರು 300 ಗ್ರಾಂ ತೂಕದ ಬೆಳ್ಳಿಯ ಹರಿವಾಣಗಳು ಸಹಿತ 19.05 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆಂದು ದೂರಲಾಗಿದೆ.
ಮನೆಯ ಮೇಲಿನ ಮಹಡಿಯಲ್ಲಿ ದಿವಾಕರ ಶೆಟ್ಟಿ ಅವರ ನಿಕಟ ವ್ಯಕ್ತಿ ಮಲಗಿದ್ದು, ಅವರಿಗೆ ಈ ಯಾವುದೇ ಕೃತ್ಯ ಗಮನಕ್ಕೆ ಬಂದಿರಲಿಲ್ಲ. ಆ ವ್ಯಕ್ತಿ ಮಲಗಿದ್ದ ಕೋಣೆಗೂ ಕಳ್ಳರು ಬಂದು ಜಾಲಾಡಿದ್ದರೆನ್ನಲಾಗಿದೆ. ಅಲ್ಲದೆ ವರ ಮೊಬೈಲ್‌ನ್ನು ಕಳ್ಳರು ಕೊಂಡೊಯ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸೆದಿರುವುದು ಕಂಡುಬಂದಿದೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು, ವೃತ್ತ ನಿರೀಕ್ಷಕ ಅಜ್ಜತ್ ಅಲಿ, ಎಸೈ ತೇಜಸ್ವಿ, ಬೆರಳಚ್ಚು ವಿಭಾಗದ ನಿರೀಕ್ಷಕಿ ಮೋಹಿನಿ ಸಹಿತ ಕಾಪು ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದ ಕಾಣಿಕೆ ಡಬ್ಬಿ ಕಳವು
ಪಡುಬಿದ್ರಿಯ ಪಾದೆಬೆಟ್ಟು ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಡರಾತ್ರಿ ನುಗ್ಗಿದ ಕಳ್ಳರು 1500ರೂ. ನಗದನ್ನು ಕಳವುಗೈದಿರುವ ಬಗ್ಗೆ ವರದಿಯಾಗಿದೆ.
ಕಳ್ಳರು ಎರಡು ಕಾಣಿಕೆ ಡಬ್ಬಿಗಳು, ಒಂದು ಕಾಲು ದೀಪ ಹಾಗೂ ಒಂದು ಮುಟ್ಟುಕತ್ತಿಗಳನ್ನು ಹೊರಗೆ ತಂದು, ಕಾಲು ದೀಪ, ಮುಟ್ಟುಕತ್ತಿಗಳನ್ನು ಬಳಸಿ ಡಬ್ಬಿಗಳನ್ನು ಒಡೆದು ನಗದು ಕಳವು ಮಾಡಿದ್ದಾರೆಂದು ದೂರಲಾಗಿದೆ.







