ವಿವಿಧೆಡೆ ಕಬ್ಬಿಣದ ಶೀಟುಗಳ ಕಳವು : ಪ್ರಕರಣ ದಾಖಲು

ಉಡುಪಿ : ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಟ್ಟಡ ಕಾಮಗಾರಿಗಳಿಗಾಗಿ ತಂದಿರಿಸಲಾದ ಸಾವಿರಾರು ರೂ. ಮೌಲ್ಯದ ಕಬ್ಬಿಣದ ಶೀಟ್‌ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಗುತ್ತಿಗೆದಾರ ಶಂಕರಪುರದ ಉಮೇಶ್ ಪೂಜಾರಿ ಪಂಜಿಮಾರಿನಲ್ಲಿ ಕಟ್ಟಡ ಕಾಮಗಾರಿಗೆ ಉಪಯೋಗಿಸಲು ತಂದಿದ್ದ 75 ಕಬ್ಬಿಣದ ಶೀಟ್‌ಗಳನ್ನು ಅ.3ರಂದು ರಾತ್ರಿ ವೇಳೆ ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಮೌಲ್ಯ 75,000ರೂ. ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ : ಗುತ್ತಿಗೆದಾರ ಶಿರಿಯಾರ ಗ್ರಾಮದ ರಾಘವೇಂದ್ರ ಆಚಾರ್ಯ ಕಟ್‌ಬೇಲ್ತೂರು ಎಂಬಲ್ಲಿ ಮನೆ ಕೆಲಸದ ಕಾಮಗಾರಿಗಾಗಿ 50 ಸೆಂಟ್ರಿಂಗ್ ಶೀಟ್‌ಗಳನ್ನು ಇಟ್ಟಿದ್ದರು. ಸೆ.28ರಂದು ರಾತ್ರಿ ಕಳ್ಳರು ಈ ಸೆಂಟ್ರಿಂಗ್ ಶೀಟುಗಳನ್ನು ಕಳವುಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 50,000ರೂ. ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ : ಗುತ್ತಿಗೆದಾರ ಅದಮಾರಿನ ನಾಗರಾಜ ಆಚಾರ್ಯ ಎಂಬವರು ಮುದರಂಗಡಿಯ ದಳಂತರಿ ಕೆರೆ ಎಂಬಲ್ಲಿ ಮನೆ ಕಟ್ಟಡ ಸೆಂಟ್ರಿಂಗ್ ಕೆಲಸಕ್ಕೆಂದು ಒಟ್ಟು 80 ಹೊಸ ಸೆಂಟ್ರಿಂಗ್ ತಗಡು ಶೀಟುಗಳನ್ನು ಉಪಯೋಗಿಸಿ ಆ.23ರಂದು ಇರಿಸಿದ್ದು, ಸೆ.11ರಂದು ಸ್ಥಳಕ್ಕೆ ಬಂದು ನೋಡಿದಾಗ ಎಲ್ಲ 80 ಸೆಂಟ್ರಿಂಗ್ ತಗಡು ಶೀಟುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಇವುಗಳ ಒಟ್ಚಟು ಮೌಲ್ಯ 40,000ರೂ. ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







