ಜಾನಪದ ಸಂಶೋಧನೆಯಲ್ಲಿ ಸಿದ್ಧಾಂತ ಅತೀ ಮುಖ್ಯ: ಡಾ.ಅಭಯ ಕುಮಾರ್

ಉಡುಪಿ: ಜಾನಪದ ಸಂಶೋಧನೆಯಲ್ಲಿ ಸಿದ್ಧಾಂತ ಅತೀ ಮುಖ್ಯ. ಜಾನಪದದಲ್ಲಿ ನಿಜವಾದ ಸಂಶೋಧನೆ ಆಗಬೇಕಾದರೆ ಜಾನಪದದಲ್ಲಿನ ಸಿದ್ಧಾಂತದೊಂದಿಗೆ ಚೌಕಟ್ಟಿನೊಳಗೆ ವಿಷಯವನ್ನು ಮಂಡನೆ ಮಾಡಬೇಕು. ಇದು ನಮಗೆ ಬೇರೆ ಬೇರೆ ದಾರಿ ಯನ್ನು ತೋರಿಸುತ್ತದೆ. ಆಗ ಮಾತ್ರ ಸಂಶೋಧನೆ ತುಂಬಾ ಗಟ್ಟಿಯಾಗಿ ಇರಲು ಸಾಧ್ಯವಾಗುತ್ತದೆ ಎಂದು ಜಾನಪದ ಸಂಶೋಧಕ, ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅಭಯ ಕುಮಾರ್ ಹೇಳಿದ್ದಾರೆ.
ಯುವವಾಹಿನಿ ಉಡುಪಿ ಘಟಕದ ವತಿಯಿಂದ ರವಿವಾರ ಚಿಟ್ಪಾಡಿ ಲಕ್ಷ್ಮೀ ಸಭಾಭವನದಲ್ಲಿ ಆಯೋಜಿಸಲಾದ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಪ್ರಶಸ್ತಿ ಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಕರ್ನಾಟಕದಲ್ಲಿ ಸಿದ್ಧಾಂತದೊಂದಿಗೆ ಜಾನಪದ ಅಧ್ಯಯನ ಮಾಡು ವವರು ತೀರಾ ವಿರಳ. ಭಾರತ ದೇಶದಲ್ಲಿ ಸಂಶೋಧನೆಯಲ್ಲಿನ ಪ್ರದರ್ಶನ ಸಿದ್ಧಾಂತ ಅಂದರೆ ಕೇವಲ ಅದು ಪ್ರದರ್ಶನ ಅಲ್ಲ. ಸಂಸ್ಕೃತಿಯ ಭಾಗವಾಗಿದೆ. ಈ ರೀತಿಯ ಅಧ್ಯಯನದಿಂದ ಅವಳಿ ವೀರರಾದ ಕೋಟಿ ಚೆನ್ನಯ್ಯರು ಆಡಳಿತ ವ್ಯವಸ್ಥೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿರುವ ಪ್ರತಿಭಟನೆಯ ಸೆಲೆಯಾಗಿ ಕಾಣುತ್ತಾರೆ ಎಂದರು.
ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ದುಗ್ಗಪ್ಪ ಕಜೆಕಾರ್ ಅಭಿನಂದನ ಮಾತುಗಳನ್ನಾಡಿ, ಇಂದಿನ ಕೃತಕ ಬುದ್ದಿ ಮತ್ತೆ ಯುಗದಲ್ಲಿ ನಾವು ನಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬುದ್ದಿಗೆ ಕೆಲಸ ಕೊಡದೆ ಕೃತಕ ಬುದ್ದಿಮತ್ತೆಗೆ ಅವಲಂಬನೆ ಆಗುತ್ತಿದ್ದೇವೆ. ಆ ಮೂಲಕ ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೆವೆ. ಆದರೆ ನಿಜವಾದ ಸೃಜನಶೀಲತೆ ಇರುವುದು ನಮ್ಮ ಜಾನಪದದಲ್ಲಿ ಎಂದು ತಿಳಿಸಿದರು.
ಕೃಷಿ ಸಂಸ್ಕೃತಿಗೂ ಜಾನಪದಕ್ಕೂ ಅವಿನಾಭ ಸಂಬಂಧ ಇದೆ. ಇಂದು ಕೃಷಿ ಯಿಂದ ದೂರವಾಗುತ್ತಿದ್ದಂತೆ ಜಾನಪದ ಕೂಡ ನಮ್ಮಿಂದ ಮರೆಯಾಗುತ್ತಿದೆ. ತುಳುನಾಡಿನಲ್ಲಿದ್ದ ೧೨ ಜಾನಪದ ಕುಣಿತಗಳು ಈಗ ಇಲ್ಲವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ನಮ್ಮ ಮಕ್ಕಳನ್ನು ತುಳುವರಾಗಿ ಬೆಳೆಸುವುದು ಮತ್ತು ನಮ್ಮ ಜಾನಪದ ಸಂಸ್ಕೃತಿಯನ್ನು ಅವರಿಗೆ ಪರಿಚಯಿಸುವ ಬಹಳ ಸವಾಲು ನಮ್ಮ ಮುಂದೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಲಾ ಶಿಕ್ಷಕ ಕಲ್ಮಾಡಿ ಶೇಖರ ಪೂಜಾರಿ ಅವರಿಗೆ ಜಾನಪದ ಕಲಾವಿದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಅಂಶುಮಾಲಿ ಮಣಿಪಾಲ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಸುರೇಖಾ ಕೆ. ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಮಾತನಾಡಿದರು. ಅಧ್ಯಕ್ಷತೆಯನ್ನು ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್ ಮಂಚಿ ವಹಿಸಿದ್ದರು. ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.
ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಭಾಸ್ಕರ ಸುವರ್ಣ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಮಹೇಶ್ ಕುಮಾರ್ ಮಲ್ಪೆ, ಸಚ್ಚೇಂದ್ರ ಅಂಬಾಗಿಲು ಮಾಡಿದರು. ಯುವವಾಹಿನಿ ಉಡುಪಿ ಕಾರ್ಯದರ್ಶಿ ವೀಕ್ಷೀತ್ ವಂದಿಸಿದರು. ತೇಜಸ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.






