ನೇಜಾರು ತಾಯಿ ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಮೂರು ವರ್ಷ: ಉಡುಪಿ ಕೋರ್ಟ್ನಲ್ಲಿ 81 ಸಾಕ್ಷಿಗಳ ವಿಚಾರಣೆ ಪೂರ್ಣ

ಪ್ರವೀಣ್ ಚೌಗುಲೆ
ಉಡುಪಿ, ನ.13: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣ ನಡೆದು ನ.12ಕ್ಕೆ ಮೂರು ವರ್ಷ ತುಂಬಿದೆ. ಆದರೆ, ಆ ಭೀಕರ ಘಟನೆಯ ನೆನಪು ಮಾತ್ರ ಇನ್ನೂ ಜನಮಾನಸದಿಂದ ಮಾಸಿಲ್ಲ. ಒಂದೇ ಕುಟುಂಬದ ನಾಲ್ವರನ್ನು ಕಳೆದುಕೊಂಡ ಕುಟುಂಬ ಇಂದಿಗೂ ನೋವು ಅನುಭವಿಸುತ್ತಿದೆ. ಪ್ರಕರಣ ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಮೃತರ ಕುಟುಂಬ ನ್ಯಾಯದ ನಿರೀಕ್ಷೆಯಲ್ಲಿದೆ.
2023ರ ನ.12ರಂದು ನೇಜಾರಿನ ತೃಪ್ತಿ ಲೇಔಟ್ನಲ್ಲಿ ಹಾಡಹಗಲೇ ನಡೆದ ಈ ಭೀಕರ ಹತ್ಯಾಕಾಂಡ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ದುಷ್ಕರ್ಮಿಯೊಬ್ಬನ ಕ್ರೌರ್ಯಕ್ಕೆ ಒಂದೇ ಕುಟುಂಬದ ತಾಯಿ ಮತ್ತು ಮೂವರು ಮಕ್ಕಳು ಬಲಿಯಾಗಿದ್ದರು. ಕ್ಷಣಾರ್ಧದಲ್ಲಿ ನಾಲ್ಕು ಜೀವಗಳನ್ನು ಬಲಿ ಪಡೆದ ಈ ಘಟನೆ ಉಡುಪಿ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ಜನರನ್ನೂ ಬೆಚ್ಚಿಬೀಳಿಸಿತ್ತು. ತಮ್ಮ ಕುಟುಂಬದ ನಾಲ್ವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಮೃತರ ಕುಟುಂಬದ ಪ್ರಮುಖ ಆಗ್ರಹವಾಗಿದೆ.
ಕೊಲೆ ಪ್ರಕರಣದ ಹಿನ್ನೆಲೆ...
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏಕ್ಸ್ಪ್ರೆಸ್ ಸಂಸ್ಥೆಯಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೇಜಾರಿನ ನೂರ್ ಮುಹಮ್ಮದ್ ಅವರ ಪುತ್ರಿ ಐನಾಝ್ (21)ಳ ಮೇಲಿನ ಅತೀಯಾದ ವ್ಯಾಮೋಹದಿಂದ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್ ಪ್ರದೀಪ್ ಚೌಗುಲೆ (40) ನ.12ರಂದು ಕೊಲೆಗೆ ಯೋಜನೆ ರೂಪಿಸಿದ್ದನು.
ಅದೇ ರೀತಿ ಯಾವುದೇ ಸುಳಿವು ಲಭಿಸದಂತೆ ತನ್ನ ಕಾರನ್ನು ಹೆಜಮಾಡಿ ಟೋಲ್ಗೆ ಮೊದಲೇ ನಿಲ್ಲಿಸಿ, ಅಟೋ, ಬಸ್, ಬೈಕ್ಗಳ ಮೂಲಕ ನೇಜಾರು ತಲುಪಿದ್ದನು. ಅಲ್ಲಿ ಬೆಳಗ್ಗೆ 9ಗಂಟೆಯ ಸುಮಾರಿಗೆ ಐನಾಝ್ ಮನೆಯೊಳಗೆ ಹೋದ ಪ್ರವೀಣ್, ಐನಾಝ್ ಮತ್ತು ತಡೆಯಲು ಬಂದ ಆಕೆಯ ತಾಯಿ ಹಸೀನಾ (48), ಅಕ್ಕ ಅಫ್ನಾನ್ (23) ಹಾಗೂ ತಮ್ಮ ಆಸೀಮ್ (13)ರನ್ನು ಬರ್ಬರವಾಗಿ ಚೂರಿಯಿಂದ ಕೊಲೆಗೈದು ಪರಾರಿಯಾಗಿದ್ದನು.
ಮನೆಯಲ್ಲಿದ್ದ ಹಸೀನಾರ ಅತ್ತೆ ಹಾಜಿರಾ (80) ಚೂರಿ ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ.14ರಂದು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.
81 ಸಾಕ್ಷಿಗಳ ವಿಚಾರಣೆ ಪೂರ್ಣ
ಪ್ರಕರಣದ ತನಿಖೆ ನಡೆಸಿದ ಪೊಲೀಸರು 2024ರ ಫೆ.12ರಂದು ಪ್ರಕರಣ ಮೊದಲ ಹಂತ ಮತ್ತು ಎರಡನೇ ಹಂತದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 15 ಸಂಪುಟಗಳಲ್ಲಿ 2202 ಪುಟಗಳ ದೋಷಾರೋಪಣಾಪಟ್ಟಿ ಸಲ್ಲಿಸಿದ್ದು, ಒಟ್ಟು 244 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು.
ಇದೀಗ ಎಲ್ಲ ಹಂತಗಳು ಮುಗಿದು, ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ನ.5 ಮತ್ತು ನ.11ರಂದು 11 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಇದರಲ್ಲಿ ಒಂದು ಸಾಕ್ಷಿಯ ಪಾಟಿ ಸವಾಲು ಬಾಕಿ ಇದ್ದು, ಉಳಿದ ಎಲ್ಲ ಸಾಕ್ಷಿಗಳ ಪೂರ್ಣ ವಿಚಾರಣೆ ನಡೆಸಲಾಗಿದೆ. ಈ ಮೂಲಕ ಈ ಪ್ರಕರಣದಲ್ಲಿ ಒಟ್ಟು 81 ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಪೂರ್ಣ ಗೊಂಡಿದೆ. ಮುಂದಿನ ಸಾಕ್ಷಿಗಳ ವಿಚಾರಣೆಯನ್ನು ಡಿ.3 ಮತ್ತು 9ಕ್ಕೆ ನಿಗದಿ ಪಡಿಸಿ ನ್ಯಾಯಾಲಯ ಆದೇಶ ನೀಡಿದೆ ಎಂದು ವಿಶೇಷ ಸರಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ ತಿಳಿಸಿದ್ದಾರೆ.
‘ನಮ್ಮ ಕುಟುಂಬ ಕಳೆದುಕೊಂಡ ಅಮಾಯಕ ನಾಲ್ಕು ಜೀವಗಳಿಗೆ ಬೆಲೆ ಬರಬೇಕಾದರೆ ಈ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ನಾಲ್ಕು ಜೀವವನ್ನು ಹತ್ಯೆಗೈದ ಆರೋಪಿಗೆ ಈ ನೆಲದಲ್ಲಿ ಬದುಕಲು ಯಾವುದೇ ಹಕ್ಕಿಲ್ಲ. ನನಗೆ ನನ್ನ ದೇಶದ ಸಂವಿಧಾನ ಹಾಗೂ ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ನಾನು ಸಾಯುವ ಮೊದಲು ಅವನನ್ನು ಗಲ್ಲಿಗೆ ಏರಿಸುವುದನ್ನು ನೋಡಬೇಕು. ಈಗ ನಮ್ಮ ಮನೆ ಖಾಲಿಯಾಗಿದೆ. ಪತ್ನಿ ಮಕ್ಕಳ ನೆನಪು ಸದಾ ಕಾಡುತ್ತಿದೆ’
-ನೂರ್ ಮುಹಮ್ಮದ್, ಸಂತ್ರಸ್ತ ಕುಟುಂಬದ ಯಜಮಾನ






