‘ತಿಬ್ಯಾನ್-ಬ್ರೈನ್ ರೈನ್ ಎಕ್ಸ್‌ಪೋ’ ಕಾರ್ಯಕ್ರಮ ಉದ್ಘಾಟನೆ

ಶಿರ್ವ, ಜ.1: ಶಿರ್ವ ಫೈಝುಲ್ ಇಸ್ಲಾಮ್ ಪಬ್ಲಿಕ್ ಸ್ಕೂಲ್ ವತಿಯಿಂದ ತಿಬ್ಯಾನ್-ಬ್ರೈನ್ ರೈನ್ ಎಕ್ಸ್‌ಪೋ-2025-26 ಕಾರ್ಯಕ್ರಮವನ್ನು ಶಾಲೆಯ ಕ್ಯಾಂಪಸ್‌ನಲ್ಲಿ ಡಿ.29ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಕ್ಸ್‌ಪರ್ಟೈಸ್ ಸಂಸ್ಥೆಯ ಚೀಪ್ ಆಪರೇಟಿಂಗ್ ಆಫೀಸರ್ ಕೆ.ಎಸ್.ಶೇಖ್ ಕರ್ನಿರೆ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಉತ್ತಮ ವೇದಿಕೆ ಇದಾಗಿದೆ. ಮಕ್ಕಳ ಪ್ರತಿಭೆ ಯನ್ನು ಪೋಷಕರು ಅದರಲ್ಲೂ ಮುಖ್ಯವಾಗಿ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಆ ಮೂಲಕ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಸಾಧಕರ ಸಾಧನೆಯನ್ನು ಸ್ಪೂರ್ತಿಯಾಗಿ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಸಾಧಿಸಬೇಕು. ಈ ವಿದ್ಯಾ ಸಂಸ್ಥೆ ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿರದೆ ಮಕ್ಕಳಲ್ಲಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಖಾಲಿದ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಾವರದ ಹಲೀಮಾ ಸಾಬ್ಜು ಆಡಿಟೋರಿಯಂ ಮಾಲೀಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಕಾರ್ಕಳದ ಸಿಟಿ ನರ್ಸಿಂಗ್ ಉದ್ಯಮಿ ಅಶ್ರಫ್ ಕೋಡಿಬೆಂಗ್ರೆ, ಉಡುಪಿ ಸಮಾಜ ಸೇವಕ ಇಕ್ಬಾಲ್ ಮನ್ನಾ ಹಾಗೂ ಫೈಝುಲ್ ಇಸ್ಲಾಂ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶಫಿ ಅಹಮದ್ ಖಾಝಿ, ಫಾತಿಮಾ ಅಝ್ಬಃ, ಇಬ್ರಾಹಿಂ ಮೌಲಾನ ಮುಖ್ಯ ಅತಿಥಿಗಳಾಗಿದ್ದರು.
ಸ್ಕೂಲ್‌ನ ಉಪಾಧ್ಯಕ್ಷರಾದ ಉಮರ್ ಇಸ್ಮಾಯಿಲ್, ಹಸನಬ್ಬ ಶೇಖ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್, ಜಂಟಿ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಮುಖ್ಯೋಪಾಧ್ಯಾಯಿನಿ ಖೈರುನ್ನಿಸಾ, ಶಾಲಾ ಪ್ರತಿನಿಧಿ ಮೊಹಮ್ಮದ್ ಯೂನುಸ್, ಕೋಶಾಧಿಕಾರಿ ಪರ್ವೇಝ್ ಸಲೀಮ್, ಅರಬಿಕ್ ದೀನಿಯಾತ್ ವಿಭಾಗದ ಮುಖ್ಯಸ್ಥ ಉಬೈದುರ‌್ರಹ್ಮಾನ್ ನದ್ವಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಧೆಡೆಯ ಒಟ್ಟು ಎಂಟು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.







