ಉಡುಪಿ ಪರ್ಯಾಯ ಮಹೋತ್ಸವಕ್ಕೆ ಬಿಗಿ ಭದ್ರತೆ| ಬಂದೋಬಸ್ತ್ ಕರ್ತವ್ಯಕ್ಕೆ 1500ಕ್ಕೂ ಅಧಿಕ ಪೊಲೀಸರ ನಿಯೋಜನೆ: ಎಸ್ಪಿ ಹರಿರಾಂ ಶಂಕರ್

ಉಡುಪಿ, ಜ.14: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲು ಉದ್ದೇಶಿಸಲಾಗಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಯ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾ ಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪರ್ಯಾಯ ಮಹೋತ್ಸವಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆ ಇದೆ. ಅಲ್ಲದೇ ಗಣ್ಯ ವ್ಯಕ್ತಿಗಳು ಜಿಲ್ಲಾ ಭೇಟಿ ಹಾಗೂ ಜಿಲ್ಲೆಯ ಸೂಕ್ಷತೆಯನ್ನು ಕಂಡು ಮುಂಜಾಗ್ರತೆಗಾಗಿ ಮತ್ತು ಬಂದೊಬಸ್ತ್ ಕರ್ತವ್ಯಕ್ಕೆ ಒಬ್ಬರು ಎಸ್ಪಿ, ಒಬ್ಬರು ಹೆಚ್ಚುವರಿ ಎಸ್ಪಿ, ಎಂಟು ಡಿವೈಎಸ್ಪಿ, 21 ಪೊಲೀಸ್ ನಿರೀಕ್ಷ ಕರು, 61 ಪೊಲೀಸ್ ಉಪನಿರೀಕ್ಷಕರು, 110 ಸಹಾಯಕ ಪೊಲೀಸ್ ಉಪನಿರೀಕ್ಷಕರು, 812 ಪೊಲೀಸ್ ಸಿಬ್ಬಂದಿ ಹಾಗೂ 200 ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿ ಕೊಳ್ಳಲಾಗಿದೆ.
ಅಲ್ಲದೇ 4 ಕೆಎಸ್‌ಆರ್‌ಪಿ, 14-ಡಿಎಆರ್, 5-ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶ್ರೀಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗೆ 70 ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಬಳಿ ಹೊರಠಾಣೆಗಳನ್ನು ತೆರಯಲಾಗಿದೆ. ಒಂದು ಕ್ಯೂಆರ್‌ಟಿ ತಂಡ, 6 ಆಂಬ್ಯುಲೆನ್ಸ್, 6 ಅಗ್ನಿಶಾಮಕ, 5 ಅಗ್ನಿ ಬುಲೆಟ್, 24 ಪಬ್ಲಿಕ್ ಅಡ್ರೆಸ್ ಸಿಸ್ಟಂ, 6 ಪೊಲೀಸ್ ಸಹಾಯವಾಣಿ, 120 ಬೈನಾಕುಲರ್, 3 ಡ್ರೋನ್ ಕ್ಯಾಮೆರಾ, 300 ಬ್ಯಾರಿಕೇಡ್‌ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.







