ಸಿಜೆಐ ಮೇಲೆ ಶೂ ಎಸೆದ ಕೃತ್ಯ ಖಂಡಿಸಿ ಕುಂದಾಪುರದಲ್ಲಿ ಪಂಜಿನ ಮೆರವಣಿಗೆ, ಪ್ರತಿಭಟನೆ

ಕುಂದಾಪುರ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠದತ್ತ ಶೂ ಎಸೆದ ಪ್ರಕರಣವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕುಂದಾಪುರ ತಾಲೂಕು ಸಮಿತಿ ಮತ್ತು ಸಹಬಾಳ್ವೆ, ಕರ್ನಾಟಕ ಮುಸ್ಲಿಮ್ ಒಕ್ಕೂಟ, ಕ್ಯಾಥೋಲಿಕ್ ಒಕ್ಕೂಟ, ಸಿಐಟಿಯು ಸಂಘಟನೆಗಳ ನೇತೃತ್ವದಲ್ಲಿ ರವಿವಾರ ಕುಂದಾಪುರದಲ್ಲಿ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಂದಾಪುರದ ನ್ಯಾಯವಾದಿ ಟಿ.ಬಿ.ಶೆಟ್ಟಿ ಅವರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಬಿ.ಆರ್.ಗವಾಯಿ ಪೀಠದತ್ತ ಶೂ ಎಸೆದ ಪ್ರಕರಣ ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು, ಇದು ಕೇವಲ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ನಡೆಸಿದಂತ ಕೃತ್ಯವಲ್ಲ. ಭಾರತದ ಸಂವಿಧಾನಾತ್ಮಕ ಆಡಳಿತ ಪ್ರಜಾಪ್ರಭುತ್ವದ ಮೇಲಾಗಿರುವ ಹೇಯ ಕೃತ್ಯ. ಆತನಿಗೆ ಕಾನೂನಿನಡಿಯಲ್ಲಿ ಕಠಿಣವಾದ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ದಸಂಸ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಈ ದೇಶದಲ್ಲಿ ಸನಾತನ ಧರ್ಮದವರೆಂದು ಹೇಳಿಕೊಳ್ಳುವ ಬಳಗ ಹೆಚ್ಚುತ್ತಿದ್ದು, ಇವರಿಗೆ ದೇಶದ ಅತ್ಯುನ್ನತ ಸಂವಿಧಾನ ಮೇಲೆ ಗೌರವವಿಲ್ಲ. ಧರ್ಮ ಮತ್ತು ಧಾರ್ಮಿಕತೆಯ ಹೆಸರಿನಲ್ಲಿ ಅಮಾಯಕ ಯುವಜನತೆಯನ್ನು ದಿಕ್ಕು ತಪ್ಪಿಸಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಇವರುಗಳು ಅಪಾಯಕಾರಿ ಧರ್ಮಾಂದರು. ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲದಿರುವುದು ಇವರುಗಳು ನಡೆಸುವ ಹೇಯ ಕೃತ್ಯಗಳೇ ಸಾಕ್ಷಿಯಾಗಿದೆ. ಭಾರತದ ಸಂವಿಧಾನಾತ್ಮಕ ಆಡಳಿತದಲ್ಲಿರಲು ಕಷ್ಟವಾದರೆ ಭಾರತದಿಂದ ತೊಲಗಿರಿ ಎಂದು ಆಗ್ರಹಿಸಿದರು.
ಸಹಬಾಳ್ವೆಯ ಸಂಚಾಲಕ ರಾಮಕೃಷ್ಣ ಹೆರ್ಳೆ ಮಾತನಾಡಿ, ದೇಶದಲ್ಲಿ ಇಂತಹ ಗಂಭೀರ ಘಟನೆ ನಡೆದರೂ, ಪ್ರಧಾನಿ ಸಹಿತ ಕೇಂದ್ರ ಸಚಿವರು ಅಂದು ರಾತ್ರಿಯವರೆಗೂ ಮೌನ ಮುರಿದು ಕಾನೂನು ಕ್ರಮಕ್ಕೆ ಆಗ್ರಹಿಸದೆ ಸನಾತನಿಗಳಿಗೆ ಸಮ್ಮತ ಸೂಚಿಸಿದಂತಾಗಿದೆ. ದೇಶದಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯದಲ್ಲಿರುವ ದಲಿತರನ್ನು ಸನಾತನವಾದ ಸಹಿಸುತ್ತಿಲ್ಲ. ಇಂತವರಿಗೆ ಕೇಂದ್ರ ಬಿಜೆಪಿ ಸರಕಾರ ಮಣೆ ಹಾಕುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ದಸಂಸ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಭಿರ್ತಿ, ಜಿಲ್ಲಾ ಮುಸ್ಲಿಂ ಒಕ್ಕೂಟದ ಇದ್ರೀಸ್ ಹೂಡೆ, ರಿಯಾಝ್ ಕೋಡಿ, ಮುಹಮ್ಮದ್ ರಫೀಕ್ ಬಿಎಸ್‌ಎಫ್, ಪುರಸಭೆ ಸದಸ್ಯರಾದ ಅಬ್ಬು ಮುಹಮ್ಮದ್, ಪ್ರಭಾವತಿ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಸಹಬಾಳ್ವೆಯ ಆಶಾ ಕರ್ವೆಲ್ಲೋ, ರಾಘವೇಂದ್ರ ಪೂಜಾರಿ ಹಳೆಅಳಿವೆ, ಪ್ರಮುಖರಾದ ಶಶಿಧರ್ ಹೆಮ್ಮಾಡಿ, ಸುನೀಲ್ ಪೂಜಾರಿ ಕೋಡಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಿ., ಜಿಲ್ಲಾ ಉಪಾಧ್ಯಕ್ಷ ಸುರೇಶ ಕಲ್ಲಾಗರ, ನರಸಿಂಹ ಎಚ್., ಮಹಾಬಲ ವಡೇರಹೋಬಳಿ, ಡಿವೈಎಫ್‌ಐ ಗಣೇಶ್ ದಾಸ್, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ರವಿ ವಿ.ಎಂ., ಆನಗಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ, ಸದಸ್ಯೆ ಗೀತಾ, ದಸಂಸ ಪ್ರಮುಖರಾದ ಶ್ಯಾಮ ಸುಂದರ್ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಮಂಜುನಾಥ ನಾಗೂರು, ಕುಮಾರ್ ಕೋಟ, ಗೀತಾ ಸುರೇಶ್, ಸುರೇಶ ಕುರ್ಮಾ ಬಾರ್ಕೂರು, ಚಂದ್ರ ಕೊರ್ಗಿ, ಉದಯ್ ಕುಮಾರ್, ಅಶೋಕ ಮೊಳಹಳ್ಳಿ, ಸತೀಶ್ ರಾಮನಗರ, ಚಂದ್ರ ಉಳ್ಳೂರು, ಸತೀಶ್, ಶ್ರೀಕಾಂತ್ ಹಿಜಾಣ, ದಿನೇಶ್ ಹೊಸ್ಮಟ, ಮಂಜು ನಾಥ ಬಾಳ್ಕುದ್ರು, ಸುರೇಶ್ ಭಿರ್ತಿ, ಶಿವರಾಜ್ ಬೈಂದೂರು, ಭಾಸ್ಕರ ಕೆರ್ಗಾಲ್ ಮೊದಲಾದವರು ಉಪಸ್ಥಿತರಿದ್ದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತಾಡಿದರು. ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಸ್ವಾಗತಿಸಿದರು.







