ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಜ್ಯದ 5970 ಗ್ರಾಮಗಳಲ್ಲೂ ತರಬೇತಿ: ಡಾ.ತಿಪ್ಪೇಸ್ವಾಮಿ

ಉಡುಪಿ, ಜ.20: ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ರಾಜ್ಯದ 5970 ಗ್ರಾಮಗಳಲ್ಲಿಯೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ 26 ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮ ಪೂರ್ಣಗೊಂಡಿದೆ. ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಜೊತೆ ಸಂವಾದ ನಡೆಸಿ ಅವರ ಸಮಸ್ಯೆ, ಅಹವಾಲು ಗಳನ್ನು ಆಲಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ತಿಳಿಸಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಪಾಲನ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಮಕ್ಕಳ ರಕ್ಷಣೆಯ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳ ಜೊತೆ ವ್ಯವಹರಿಸುವ ಮಕ್ಕಳ ಪಾಲನಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು, ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರು ಕೇವಲ ಕಾನೂನಾತ್ಮಕ ದೃಷ್ಟಿಯಿಂದ ಮಾತ್ರ ನೋಡದೆ ಮಕ್ಕಳ ಜೀವನದ ಆಶಾಕಿರಣವಾಗಿ ಆರೈಕೆ ಮತ್ತು ಪುನರ್ವಸತಿ ಪ್ರಕ್ರಿಯೆಗಳನ್ನು ರೂಪಿಸಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳ ರಕ್ಷಣಾ ಘಟಕದಲ್ಲಿ ಮಕ್ಕಳ ಜೊತೆ ವ್ಯವಹರಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಮನನ ಮಾಡುವ ಜೊತೆ ಕೌಶಲ್ಯವನ್ನು ಮೇಲ್ದರ್ಜೆಗೆ ಏರಿಸಿ ಮಕ್ಕಳ ಜೊತೆ ಸಂವೇದನಾಶೀಲತೆಯಿಂದ ವ್ಯವಹರಿಸಬೇಕು ಎಂದರು.
ಈ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳು ಸ್ಪಷ್ಟ ಮಾರ್ಗದರ್ಶನ ನೀಡಲಿವೆ. ಮಕ್ಕಳ ಸಮಸ್ಯೆಗಳನ್ನು ನೋಡುವ ಮತ್ತು ಅವರ ಜೊತೆ ವ್ಯವಹರಿಸುವ ಮನೋಭಾವ ಬದಲಾಗಬೇಕು. ಮಕ್ಕಳಿಗೆ ಸಂಬಂಧಿಸಿದ ಮನೋವೈಜ್ಞಾನಿಕ ಪುಸ್ತಕಗಳನ್ನು ಹೆಚ್ಚು ಓದಿದಾಗ ಮನೋಭಾವದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದ ಅವರು, ಇದಕ್ಕಾಗಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕಿ ಹಲಿಮಾ ಮಾತನಾಡಿ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಾಲನ್ಯಾಯ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಮಕ್ಕಳಿಗೆ ಸಂಬಂಧಿಸಿದ ದೂರುಗಳನ್ನು ಬರೆಯುವಾಗ ಸ್ಪಷ್ಟತೆ ಇರಬೇಕು. ತಮ್ಮಲ್ಲಿಗೆ ಬರುವ ಮಕ್ಕಳು ಇನ್ಯಾರದೊ ಎಂದು ತಾತ್ಸಾರ ಮಾಡದೆ ಆ ಜಾಗದಲ್ಲಿ ತಮ್ಮದೇ ಮಕ್ಕಳಿದ್ದಾಗ ಯಾವ ರೀತಿ ಪ್ರೀತಿ, ಕಾಳಜಿ ತೋರುತ್ತೇವೆಯೋ ಅದೇ ರೀತಿ ಸಂವೇದನೆ ತೋರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪ್ರಭು ಡಿ.ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅನುರಾಧಾ ಹಾದಿಮನಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜೂಹಿ ದಾಮೋದರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಭಾನುಮತಿ, ಮಕ್ಕಳ ರಕ್ಷಣಾ ಘಟಕದ ನಾಗರತ್ನ ಹಾಗೂ ಇತರರು ಉಪಸ್ಥಿತರಿದ್ದರು.







