ತುಟ್ಟಿಭತ್ಯೆ, ಕನಿಷ್ಟ ಕೂಲಿಗಾಗಿ ಕಾರ್ಮಿಕರ ಹಕ್ಕೊತ್ತಾಯ ಚಳವಳಿ

ಉಡುಪಿ, ಜು.24: ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ನೇತೃತ್ವದಲ್ಲಿ ಜಿಲ್ಲಾವ್ಯಾಪಿ ಹಕ್ಕೊತ್ತಾಯ ಚಳುವಳಿ ನಡೆಯುತ್ತಿರುವ ಹಿನ್ನೆಲೆ ಯಲ್ಲಿ ಇಂದು ಉಡುಪಿಯ ಅಂಬಲಪಾಡಿ ಯಲ್ಲಿರುವ ಭಾರತ್ ಬೀಡಿ ಸಂಸ್ಥೆ ಹಾಗೂ ಎಸ್‌ಕೆಎಚ್‌ಐ ಸಂತೆಕಟ್ಟೆ ಶಾಖೆ ಎದುರು ತುಟ್ಟಿಭತ್ತೆ ಹಾಗೂ ಕನಿಷ್ಠ ಕೂಲಿ ಜ್ಯಾರಿಗೊಳಿಸುವಂತೆ ಆಗ್ರಹಿಸಿ ಎಐಟಿಯುಸಿ ನೇತೃತ್ವದ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ ಬೀಡಿ ಕಾರ್ಮಿಕರು ಪ್ರತಿಭಟನೆ ನಡೆಸಿ ವ್ಯವಸ್ಥಾಪಕರಿಗೆ ಮನವಿ ಅರ್ಪಿಸಿದರು.
2015ರ ಎಪ್ರಿಲ್ 1ರಿಂದ ತುಟ್ಟಿಭತ್ತೆ ರೂ.12.75ನ್ನು ಪಾವತಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರದ ಆದೇಶದ್ದರೂ, ಮಾಲಕರು 2015ಎ.1ರಿಂದ 2018ರ ಮಾ.31ರವರೆಗೆ ಮೂರು ವರ್ಷಗಳ ಕಾಲ ಬೀಡಿ ಕಾರ್ಮಿಕರಿಗೆ ಹಾಗೂ ನೌಕರರಿಗೆ ಈ ಆದೇಶಕ್ಕೆ ಸಂಬಂಧಿಸಿ ತುಟ್ಟಿಭತ್ಯೆಯನ್ನು ಪಾಲಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಗಣೇಶ್ ಬೀಡಿ ಸಂಸ್ಥೆಯವರು ರಾಜ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ ಅರ್ಜಿ ಸಂಖ್ಯೆ 11800/2019ಕ್ಕೆ ಸಂಬಂಧಿಸಿ ಈ ವರ್ಷದ ಫೆ.28ರಂದು ತೀರ್ಪು ಪ್ರಕಟಿಸಲಾಗಿದ್ದು ಅದರಲ್ಲಿ ಸರಕಾರದ ಅಧಿಸೂಚನೆಯನ್ನು ಪುಷ್ಟೀಕರಿಸಿ ಪಾವತಿಯಾಗದಿರುವ ರೂ.12.75 ತುಟ್ಟಿಭತ್ತೆಯನ್ನು ಪಾವತಿಸಬೇಕೆಂದು ಆದೇಶಿಸಿದೆ. ಈ ಆದೇಶವು ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಬೀಡಿ ಕೈಗಾರಿಕೆಗಳಿಗೆ ಅನ್ವಯಿಸುತ್ತದೆ.
ಅಲ್ಲದೆ 2018ರ ಎ.1ರಿಂದ ಜ್ಯಾರಿ ಮಾಡಬೇಕಾಗಿದ್ದ ರೂ.210 ಕನಿಷ್ಟ ಕೂಲಿಯನ್ನೂ ನೀಡದಿರುವುದರಿಂದ ಪ್ರಸ್ತುತ ಬೀಡಿ ಕಾರ್ಮಿಕರು ಪ್ರತೀ ಸಾವಿರ ಬೀಡಿಗಳ ಮೇಲೆ ರೂ.39.98ರಷ್ಟು ಕಡಿಮೆ ಮಜೂರಿಯಿಂದ ವಂಚಿಸಲ್ಪಟ್ಟಿದ್ದಾರೆ. ರೂ.210 ಕನಿಷ್ಟಕೂಲಿಗೆ ಸಂಬಂಧಿಸಿದಂತೆ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನಾಕಾರರನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ), ಸಿಪಿಐ ಮಾಜಿ ಕಾರ್ಯದರ್ಶಿ ವಿ.ಕುಕ್ಯಾನ್, ಅಧ್ಯಕ್ಷ ವಿ.ಎಸ್.ಬೇರಿಂಜ, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ ಬಂಟ್ವಾಳ್, ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಎಂ.ಕರುಣಾಕರ ಮಾರಿಪಳ್ಳ ಮಾತನಾಡಿದರು.
ನೇತೃತ್ವವನ್ನು ಬೀಡಿ ಫೆಡರೇಶನ್‌ನ ತಿಮ್ಮಪ್ಪ ಕೆ, ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ (ಎಐಟಿಯುಸಿ) ಅಧ್ಯಕ್ಷೆ ಶಾಂತಾ ನಾಯಕ್, ಸಹಕಾರ್ಯದರ್ಶಿಗಳಾದ ಸುಚಿತ್ರಾ, ವಾರಿಜ ಅತ್ರಾಡಿ, ಉಪಾಧ್ಯಕ್ಷೆ ಅಪ್ಪಿ ಶೆಟ್ಟಿಗಾರ್ತಿ, ಸುಮತಿ ಶೆಟ್ಟಿ ,ಉಡುಪಿ ಸಿಪಿಐ ಕಾರ್ಯದರ್ಶಿ ಶಿವಾನಂದ ಯು. ವಹಿಸಿದ್ದರು
ಪ್ರಾರಂಭದಲ್ಲಿ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ (ಎಐಟಿಯುಸಿ) ಕಾರ್ಯದರ್ಶಿ ಸ್ವಾಗತಿಸಿ ಕೊನೆಯಲ್ಲಿ ಯು ಶಿವಾನಂದ ವಂದಿಸಿದರು.