ಉಡುಪಿ: ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ.408ರಷ್ಟು ಅಧಿಕ ಮಳೆ

ಉಡುಪಿ:ಕರ್ನಾಟಕ ಕರಾವಳಿಯ ಮಟ್ಟಿಗೆ ಈ ಬಾರಿಯ ಮುಂಗಾರು ಪೂರ್ವ (ಪ್ರಿ ಮಾನ್ಸೂನ್) ಮಳೆ ಹಿಂದೆಂದಿಗಿಂತಲೂ ಅಧಿಕವಾಗಿ ಸುರಿದಿದ್ದು, ಅಷ್ಟೇ ದೊಡ್ಡ ಪ್ರಮಾಣದಲ್ಲಿ ಜೀವಹಾನಿ ಹಾಗೂ ಆಸ್ತಿಪಾಸ್ತಿ ಹಾಗೂ ಸೊತ್ತುಗಳ ನಷ್ಟಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲೆಯ ಮಟ್ಟಿಗೆ ಈ ಬಾರಿ ಮೇ ತಿಂಗಳೊಂದರಲ್ಲೇ ಮುಂಗಾರು ಪೂರ್ವ ಮಳೆ ವಾಡಿಕೆಯ ಮಳೆಗಿಂತ ಶೇ.408ರಷ್ಟು ಅಧಿಕ ಪ್ರಮಾಣದಲ್ಲಿ ಸುರಿದಿರುವುದು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಕೋಪ ನಿರ್ವಹಣಾ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ಗೊತ್ತಾಗುತ್ತದೆ.
ಉಡುಪಿ ಜಿಲ್ಲೆಯ ಮಟ್ಟಿಗೆ ಮೇ ತಿಂಗಳ ವಾಡಿಕೆ ಮಳೆ 164ಮಿ.ಮೀ ಆಗಿದ್ದರೆ, ಈ ಬಾರಿ ಮೇ 1ರಿಂದ 31ರವರೆಗೆ ಜಿಲ್ಲೆಯಲ್ಲಿ ಸುರಿದಿರುವುದು ಒಟ್ಟಾರೆಯಾಗಿ ಸರಾಸರಿ 836 ಮೀ.ಮೀ. ಮಳೆ. ಇದರಲ್ಲಿ ಉಡುಪಿ ತಾಲೂಕಿನಲ್ಲಿ 904ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 744ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 873ಮಿ.ಮೀ., ಬೈಂದೂರು ತಾಲೂಕಿನಲ್ಲಿ 832ಮಿ.ಮೀ., ಬ್ರಹ್ಮಾವರ ತಾಲೂಕಿನಲ್ಲಿ 900ಮಿ.ಮೀ., ಕಾಪು ತಾಲೂಕಿನಲ್ಲಿ 898ಮಿ.ಮೀ. ಹಾಗೂ ಹೆಬ್ರಿ ತಾಲೂಕಿನಲ್ಲಿ 797ಮಿ.ಮೀ. ಮಳೆ ಮೇ ತಿಂಗಳಲ್ಲಿ ದಾಖಲಾಗಿದೆ.
ಜಿಲ್ಲೆಯಲ್ಲಿ ಕಳೆದ ಜನವರಿ ಒಂದರಿಂದ ಮೇ 31ರವರೆಗಿನ ಮಳೆಯನ್ನು ಗಣನೆಗೆ ತೆಗೆದುಕೊಂಡಾಗ ವಾಡಿಕೆ ಮಳೆ 201 ಮಿ.ಮೀ. ಆಗಿದ್ದು, ಈ ಬಾರಿ ಒಟ್ಟು 938ಮಿ.ಮೀ. ಮಳೆ ಸುರಿದಿದೆ. ಈ ಮೂಲಕ ಶೇ.367ರಷ್ಟು ಅಧಿಕ ಮಳೆಯಾಗಿದೆ. ಇನ್ನು ಮುಂಗಾರು ಪೂರ್ವ ಮಳೆ ಹೆಚ್ಚಾಗಿ ಬೀಳುವ ಮಾರ್ಚ್, ಎಪ್ರಿಲ್, ಮೇ ತಿಂಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಾಗ ಈ ಅವಧಿಯ ವಾಡಿಕೆ ಮಳೆ 199ಮಿ.ಮೀ ಆಗಿದ್ದು, ಈ ಬಾರಿ 925ಮಿ.ಮೀ. ಮಳೆಯಾಗಿದೆ. ಅಂದರೆ ಶೇ.365ರಷ್ಟು ಅಧಿಕ ಮಳೆಯನ್ನು ಈ ಸಲ ಜಿಲ್ಲೆ ಪಡೆದಿದೆ.
2025ರಲ್ಲಿ ಜನವರಿ ತಿಂಗಳಲ್ಲಿ 13.4 ಮಿ.ಮೀ. ಮಳೆಯಾದರೆ, ಫೆಬ್ರವರಿ ತಿಂಗಳಲ್ಲಿ ಯಾವುದೇ ಮಳೆ ಬಿದ್ದಿರಲಿಲ್ಲ. ಮಾರ್ಚ್ ತಿಂಗಳಲ್ಲಿ 11.8ಮಿ.ಮೀ. ಮಳೆಯಾದರೆ, ಎಪ್ರಿಲ್ ತಿಂಗಳಲ್ಲಿ 76.8ಮಿ.ಮೀ. ಮಳೆ ಜಿಲ್ಲೆಯಲ್ಲಿ ಬಿದ್ದಿದೆ. ಮುಂದಿನ ನಾಲ್ಕು ತಿಂಗಳಿನಲ್ಲಿ- ಜೂನ್, ಜುಲಾಯಿ, ಅಗಸ್ಟ್, ಸೆಪ್ಟೆಂಬರ್- ಬೀಳುವ ಮಳೆ ಮುಂಗಾರು ಮಳೆಯಾಗಿ ಪರಿಗಣಿಸಲ್ಪಡುತ್ತದೆ.
ಮೂರು ವರ್ಷಗಳಲ್ಲೇ ಅತ್ಯಧಿಕ: ಇತ್ತೀಚಿನ ವರ್ಷಗಳಲ್ಲಿ ಬಿದ್ದಿರುವ ಅತ್ಯಧಿಕ ಮುಂಗಾರು ಪೂರ್ವ ಮಳೆಯ ಪ್ರಮಾಣ ಇದಾಗಿದೆ ಎಂಬುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ. ಲಭ್ಯವಿರುವ ಮಾಹಿತಿಯಂತೆ 2022ರಲ್ಲಿ ಮೇ ತಿಂಗಳಲ್ಲಿ ಬಿದ್ದ ಒಟ್ಟು ಮಳೆ 315ಮಿ.ಮೀ. ಆಗಿದ್ದು, ಇದು ವಾಡಿಕೆಗಿಂತ ಶೇ.165ರಷ್ಟು ಅಧಿಕ. ಇನ್ನು 2023ರಲ್ಲಿ ಕೇವಲ 45ಮಿ.ಮೀ. ಮಳೆಯಾಗುವ ಮೂಲಕ ಶೇ.72ರಷ್ಟು ಕೊರತೆ ಕಂಡುಬಂದಿತ್ತು. ಕಳೆದ ವರ್ಷ ಬಿದ್ದ ಮಳೆ 203ಮಿ.ಮೀ. ಮಾತ್ರ.
2022ರಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಯಾವುದೇ ಮಳೆ ಬಿದ್ದಿರಲಿಲ್ಲ. ಮಾರ್ಚ್ ತಿಂಗಳಲ್ಲಿ 36ಮಿ.ಮೀ, ಎಪ್ರಿಲ್‌ನಲ್ಲಿ 82ಮಿ.ಮೀ. ಹಾಗೂ ಮೇಯಲ್ಲಿ 315ಮಿ.ಮೀ. ಮಳೆಯಾಗಿತ್ತು.
2023ರಲ್ಲಿ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಹನಿ ಮಳೆ ಬಿದ್ದಿರಲಿಲ್ಲ. ಎಪ್ರಿಲ್ ತಿಂಗಳಲ್ಲಿ ಕೇವಲ 6ಮಿ.ಮೀ. ಮಳೆಯಾದರೆ, ಮೇ ತಿಂಗಳಲ್ಲಿ ಸುರಿದಿದ್ದು 45ಮಿ.ಮೀ. ಮಳೆ ಮಾತ್ರ.
ಕಳೆದ ವರ್ಷ ಅಂದರೆ 2024ರಲ್ಲಿ ಜನವರಿ ತಿಂಗಳಲ್ಲಿ 46ಮಿ.ಮೀ. ಮಳೆಯಾದರೆ, ಫೆಬ್ರವರಿ ತಿಂಗಳಲ್ಲಿ ಯಾವುದೇ ಮಳೆ ಬಿದ್ದಿರಲಿಲ್ಲ. ಮಾರ್ಚ್ ತಿಂಗಳಲ್ಲಿ 2ಮಿ.ಮೀ, ಎಪ್ರಿಲ್‌ನಲ್ಲಿ 52ಮಿ.ಮೀ. ಹಾಗೂ ಮೇ ತಿಂಗಳಲ್ಲಿ 203ಮಿ.ಮೀ. ಮಳೆಯಾಗಿತ್ತು.
ಮುಂಗಾರು ಈಗಾಗಲೇ ಪ್ರಾರಂಭ?: ವಾಡಿಕೆಯಂತೆ ನಾಳೆಯಿಂದ ಅಂದರೆ ಜೂನ್ 1ರಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಗಾಲ ಪ್ರಾರಂಭ ವಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಈಚಿನ ವರ್ಷಗಳಲ್ಲಿ ಮುಂಗಾರು ಕೇರಳವನ್ನು ಪ್ರವೇಶಿಸಿದ ಒಂದು ವಾರದಿಂದ 15 ದಿನದ ಬಳಿಕ ಕರ್ನಾಟಕ ಕರಾವಳಿಯನ್ನು ಪ್ರವೇಶಿಸುತ್ತಿತ್ತು.
ಆದರೆ ಈ ಬಾರಿ ತಜ್ಞರ ಪ್ರಕಾರ, ಮೋಡಗಳ ರಚನೆ ಹಾಗೂ ಮೋಡಗಳ ಚಲನೆಯನ್ನು ಅವಲೋಕಿಸಿದಾಗ ಮುಂಗಾರು ಈಗಾಗಲೇ ರಾಜ್ಯ ಕರಾವಳಿ ಯನ್ನು ಪ್ರವೇಶಿಸಿದೆ. ಈ ಕುರಿತಂತೆ ಹವಾಮಾನ ಇಲಾಖೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಮುಂಗಾರು 10 ದಿನಗಳ ಹಿಂದೆಯೇ ಕೇರಳವನ್ನು ಪ್ರವೇಶಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿತ್ತು.
ಹಿಂದಿನೆಲ್ಲಾ ವರ್ಷಗಳಿಗಿಂತ ಈ ಬಾರಿ ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಜೋರಾಗಿ ಸುರಿದಿರುವುದರಿಂದ ನಾಳೆಯಿಂದ ಅಧಿಕೃತವಾಗಿ ಪ್ರಾರಂಭಗೊಳ್ಳುವ ಮಳೆಗಾಲದಲ್ಲಿ ಮಳೆಯ ಪ್ರಮಾಣ ಯಾವ ರೀತಿಯಲ್ಲಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಏನೇ ಇದ್ದರೂ ಈಗಾಗಲೇ ಕಳೆದ 10 ದಿನಗಳಿಂದ ಮಳೆ ಸತತವಾಗಿ ಸುರಿಯುತ್ತಿರುವುದರಿಂದ ಕೃಷಿಕರು ಮಾತ್ರ ಖುಷಿಯಾಗಿದ್ದಾರೆ. ಹಿಂದಿನೆಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭತ್ತದ ಬೇಸಾಯಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆಗಳಲ್ಲಿ ಅವರು ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಳ್ಳು ವಂತಾಗಿದೆ. ನೇಜಿ ಬೆಳೆಯಲು ಈಗ ಹಸನಾದ ವಾತಾವರಣವಿದೆ.







