Udupi | ಟೈರ್ ಸ್ಫೋಟಗೊಂಡು ಮೀನಿನ ಲಾರಿ ಪಲ್ಟಿ; ಚಾಲಕ ಅಪಾಯದಿಂದ ಪಾರು

ಉಡುಪಿ : ಮಂಗಳೂರಿನಿಂದ ಮೀನು ಸಾಗಿಸಿಕೊಂಡು ಬರುತ್ತಿದ್ದ ಲಾರಿಯೊಂದು ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ಮಂಗಳವಾರ ಉಡುಪಿ ಅಂಬಾಗಿಲು ಸಮೀಪ ಸಂಭವಿಸಿದೆ.
ಲಾರಿಯ ಹಿಂಬದಿ ಟೈರ್ ಏಕಾಏಕಿ ಸ್ಫೋಟಗೊಂಡಿದ್ದು, ಇದರಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಗೆ ಉರುಳಿ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸಿದ ವೇಳೆ ಲಾರಿಯಲ್ಲಿ ಚಾಲಕ ಒಬ್ಬರೇ ಇದ್ದರು. ಘಟನೆಯಲ್ಲಿ ಲಾರಿಗೆ ಹಾನಿಯಾಗಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ತೆರವು ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅಪಘಾತದಿಂದ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
Next Story




