ಉಡುಪಿ: ತೋನ್ಸೆ ಹೆಲ್ತ್ ಸೆಂಟರ್ ನಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಉಡುಪಿ, ಡಿ.15: ತೋನ್ಸೆ ಹೆಲ್ತ್ ಸೆಂಟರ್ ಹಾಗೂ ಬೈಕಾಡಿ ಹಸನ್ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ತೋನ್ಸೆಯ ಹೆಲ್ತ್ ಸೆಂಟರ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಸಂಸ್ಥೆಯ ಸಂಪ್ಥಾಪಕ ಬಿ.ಎಂ.ಜಾಫರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ದನ ತೋನ್ಸೆ, ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ರವೀಂದ್ರ, ನಿವೃತ್ತ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ, ಮುಸ್ತಾಕ್ ಬೆಳ್ವೆ, ಮುಹಮ್ಮದ್ ಇಮ್ತಿಯಾಝ್, ಮಣಿಪಾಲ ಮಾಹೆಯ ರಮೇಶ್ ಕಾಮತ್, ಬೈಕಾಡಿ ಹುಸೈನ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶ್ ತಿಂಗಳಾಯ, ಅಬ್ದುಲ್ ವಾಹಿದ್ ಶೇಕ್, ರೆಜಿನಾಲ್ಡ್ ಪುರ್ಟಾಡೋ ಹಾಗೂ ಕ್ರಿಕೆಟ್ ಆಟಗಾರ ಯಾದವ್ ನಾಯಕ್ ಕೆಮ್ಮಣ್ಣು ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರಿಚಯ ಹಾಗೂ ಗೌರವ ಪತ್ರವನ್ನು ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರುತ ವಾಚಿಸಿದರು. ಸಂಸ್ಥೆಯ ಐವರು ಉದ್ಯೋಗಿಗಳನ್ನು ಅವರ ಉತ್ತಮ ಸೇವೆಗಾಗಿ ವರ್ಷದ ಉದ್ಯೋಗಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನದೊಂದಿಗೆ ಗೌರವಿಸಲಾಯಿತು.
ಸಂಸ್ಥೆಯ ಮ್ಯಾನೇಜರ್ ಹರೀಶ್ ಶೆಟ್ಟಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.







