Udupi | ಎಕೆಎಂಎಸ್ ಬಸ್ ಮಾಲಕ ಸೈಫ್ ಹತ್ಯೆ ಪ್ರಕರಣ; 6 ಮಂದಿ ಆರೋಪಿಗಳ ವಿರುದ್ಧ ʼಕೋಕಾʼ ಪ್ರಕರಣ ದಾಖಲು

ಬಂಧಿತ ಆರೋಪಿಗಳು
ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಸೆ.27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ(ಸೆಕ್ಷನ್ 3 ಕೋಕಾ ಆ್ಯಕ್ಟ್)ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಈ ಪ್ರಕರಣದ ಆರೋಪಿಗಳಾದ ಉಡುಪಿ ಮಿಷನ್ ಕಂಪೌಂಡ್ ಬಳಿ ನಿವಾಸಿ ಮುಹಮ್ಮದ್ ಫೈಸಲ್ ಖಾನ್(27), ಕರಂಬಳ್ಳಿಯ ಮುಹಮ್ಮದ್ ಶರೀಫ್(37), ಕೃಷ್ಣಾಪುರದ ಅಬ್ದುಲ್ ಶುಕೂರ್(43), ಫೈಸಲ್ ಖಾನ್ ಪತ್ನಿ ರಿಧಾ ಶಭನಾ(27), ಮಾಲಿ ಮುಹಮ್ಮದ್ ಸಿಯಾನ್(31) ಎಂಬವರು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ 3 ಕೋಕಾ ಕಾಯಿದೆಯನ್ನು ತಲೆಮರೆಸಿಕೊಂಡ ಆರೋಪಿ ಸೇರಿದಂತೆ ಎಲ್ಲಾ 6 ಆರೋಪಿಗಳ ವಿರುದ್ಧವೂ ಅಳವಡಿಸಲಾಗಿದೆ. ಯಾವುದೇ ಪ್ರಕರಣಕ್ಕೆ ಸೆಕ್ಷನ್ 3 ಕೋಕಾ ಕಾಯಿದೆಯನ್ನು ಅಳವಡಿಸಿದಾಗ ಆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳ ಅಕ್ರಮ ಸಂಪಾದನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.





