ಉಡುಪಿ | ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ

ಉಡುಪಿ, ಡಿ.9: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಯಾಗಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದ ನಿವೃತ್ತ ಮುಖ್ಯ ಶಿಕ್ಷಕ ದಿನಕರ ಶೆಟ್ಟಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದು ಅನಿವಾರ್ಯ, ಇಲ್ಲವಾದರೆ ನಮ್ಮ ವಿದ್ಯಾರ್ಥಿಗಳು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ಹೇಳಿದರು.
ಕ್ರೀಡಾಕೂಟವನ್ನು ಉದ್ಯಮಿ ಹಾಗೂ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿಯ ಸದಸ್ಯ ಯಾಸೀನ್ ಕೋಡಿಬೆಂಗ್ರೆ ಶಾಂತಿಯ ಸಂಕೇತವಾಗಿರುವ ಪಾರಿವಾಳವನ್ನು ಹಾರಿಸುವುದರ ಮೂಲಕ ಉದ್ಘಾಟಿಸಿದರು. ಅನಿವಾಸಿ ಭಾರತೀಯ ಜನಾಬ್ ಖತೀಬ್ ಉಮ್ರಿ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಇತ್ತೀಚೆಗೆ ಮೈಸೂರು ವಿಭಾಗ ಮಟ್ಟದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಫುಟ್ ಬಾಲ್ ಪಂದ್ಯಾಟದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಶಹನವಾಜ್ ಹುಸೇನ್ ಹಾಗೂ ಹಿರಿಯ ವಿಶ್ವಸ್ಥ ಮಂಡಳಿ ಸದಸ್ಯ ಹುಸೇನ್ ಮಾಸ್ಟರ್ ಚಾಂಪಿಯನ್ ವಿಜೇತರಿಗೆ ಪಾರಿತೋಷಕ ವಿತರಿಸಿದರು.
ವೇದಿಕೆಯಲ್ಲಿ ಹಿರಿಯ ಟ್ರಸ್ಟಿ ಮೌಲಾನಾ ಆದಂ ಸಾಹೇಬ್, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಮುಖ್ಯ ಶಿಕ್ಷಕಿ ಸುನಂದಾ, ಪ್ರಾಂಶುಪಾಲ ರುಗಳಾದ ಡಾ.ಶಬೀನಾ, ದಿವ್ಯಾ ಪೈ, ಜಾಮಿಯಾ ವಿಭಾಗದ ಮುಖ್ಯಸ್ಥ ಕುಲ್ಸುಮ್ ಅಬೂಬಕರ್, ಇಸ್ಲಾಮಿಕ್ ವಿಭಾಗದ ಮುಖ್ಯಸ್ಥೆ ಶಾಹಿದ್ ನದ್ವಿ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ವಿಭಾಗದ ಅಕಾಡೆಮಿ ಮುಖ್ಯಸ್ಥ ಹಾಸೀಬ್ ತರಫ್ದಾರ್ ಸ್ವಾಗತಿಸಿದರು. ಶಿಕ್ಷಕಿ ಯಾಸ್ಮೀನ್ ವಂದಿಸಿದರು. ಶಿಕ್ಷಕಿ ರುಮಾನಾ ಹಾಗೂ ಶಾಹದತ್ ಕಾರ್ಯಕ್ರಮ ನಿರ್ವಹಿಸಿದರು.







