ಉಡುಪಿ| ಕೋಳಿಯ ಹಣ ನೀಡುವ ವಿಚಾರದಲ್ಲಿ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಪ್ರತಾಪ್ ಪೂಜಾರಿ, ದಿಲಿಪ್ ಶೆಟ್ಟಿ, ಸುದರ್ಶನ್ ಶೆಟ್ಟಿ, ಆಕಾಶ್
ಅಜೆಕಾರು, ಮಾ.27: ಕೋಳಿಯ ಹಣ ನೀಡುವ ಸಂಬಂಧ ನಡೆದ ಪರಸ್ಪರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, ಎರಡೂ ಪ್ರಕರಣಗಳಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಬೈರಂಪಳ್ಳಿ ಹರಿಖಂಡಿಗೆಯ ಪ್ರತಾಪ್ ಪೂಜಾರಿ (32) ಹಾಗೂ ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲಿಪ್ ಶೆಟ್ಟಿ (28) ಮತ್ತು ಮುಟ್ಲುಪಾಡಿಯ ಸುದರ್ಶನ್ ಶೆಟ್ಟಿ (36) ಹಾಗೂ ವರಂಗ ಗ್ರಾಮದ ಮೂಡುಕುಡೂರಿನ ಆಕಾಶ್ (21) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಾ.26ರಂದು ರಾತ್ರಿ 8ಗಂಟೆಗೆ ಅಂಡಾರು ಗ್ರಾಮದ ಮುಟ್ಲುಪಾಡಿ ಎಂಬಲ್ಲಿ ಕಾರು ಮತ್ತು ಬೈಕುಗಳಲ್ಲಿ ಬಂದ ಹರೀಶ, ಸುಧೀರ, ದುರ್ಗಾ, ಗುರುದೀಶ ಮತ್ತು ಪ್ರತಾಪ ಸಹಿತ ಒಟ್ಟು 15 ಮಂದಿ, ಸುದರ್ಶನ್ ಶೆಟ್ಟಿ ಎಂಬವರಿಗೆ ಹಲ್ಲೆ ನಡೆಸಿದರು. ಈ ವೇಳೆ ಪದ್ಮ ಹಾಗೂ ಆಕಾಶ್ ಎಂಬವರು ಬಿಡಿಸಲು ಹೋದಾಗ ಹರೀಶ್ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ನಂತರ ಆಕಾಶ್ಗೂ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಇವರು ಹೆಬ್ರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಪ್ರತಾಪ್ ಪೂಜಾರಿ ಹಾಗೂ ದಿಲಿಪ್ ಶೆಟ್ಟಿ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರತಿದೂರು: ಮಾ.27ರಂದು ಬೆಳಗ್ಗೆ ಸುಜಯ್ ಎಂಬವರು ಮಹೇಶ್ ಎಂಬವರೊಂದಿಗೆ ಮುಟ್ಲಪಾಡಿಯಲ್ಲಿರುವ ಸುದರ್ಶನ್ ಶೆಟ್ಟಿ ಎಂಬವರ ಕೋಳಿ ಅಂಗಡಿಗೆ ಕೋಳಿ ಖರೀದಿಸಲು ಹೋಗಿದ್ದು, ಆ ವೇಳೆ ಜೊತೆಗಿದ್ದ ಹರೀಶ್ ಪೂಜಾರಿ ಸುರ್ದಶನ್ ಅವರಿಂದ ಬರಬೇಕಾಗಿದ್ದ 12,000ರೂ. ಹಣವನ್ನು ಪಡೆದು ಕೊಳ್ಳಲು ಅಲ್ಲಿಗೆ ಬಂದಿದ್ದರು.
ಈ ವೇಳೆ ಚರ್ಚೆಗಳು ನಡೆಯುತ್ತಿದ್ದು, ಸುಜಯ್, ಸುದರ್ಶನ್ ಅವರೊಂದಿಗೆ ವಿಷಯ ಕೇಳಿದಾಗ, ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು ಎಂದು ದೂರಲಾಗಿದೆ. ಅಲ್ಲಿಯೇ ಇದ್ದ ಉಳಿದ ಆರೋಪಿಗಳು ಸೇರಿ ಸುಜಯ್, ಮಹೇಶ ಹಾಗೂ ಹರೀಶ ಪೂಜಾರಿಗೆ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆಯೂ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು, ಸುದರ್ಶನ್ ಶೆಟ್ಟಿ ಹಾಗೂ ಆಕಾಶ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.






