Udupi | ಎಂಡಿಎಂಎ ಡ್ರಗ್ಸ್ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ವಿಜಯ್ ಪೂಜಾರಿ
ಉಡುಪಿ : ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಪೊಲೀಸರು ಅ.17ರಂದು ರಾತ್ರಿ ವೇಳೆ ಅಜ್ಜರಕಾಡು ಭುಜಂಗ ಪಾರ್ಕ್ನ ಬಳಿ ಬಂಧಿಸಿ, ಸುಮಾರು 85,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉದ್ಯಾವರ ಅಂಕುದ್ರು ನಿವಾಸಿ ವಿಜಯ್ ಪೂಜಾರಿ(36) ಬಂಧಿತ ಆರೋಪಿ. ಉಡುಪಿ ನಗರ ಠಾಣಾ ಎಸ್ಸೈ ಭರತೇಶ್ ಕಂಕಣವಾಡಿ ಅವರಿಗೆ ದೊರೆತ ಖಚಿತ ಮಾಹಿತಿಯಯಂತೆ ಸ್ಕೂಟರ್ನಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿಜಯ್ ಪೂಜಾರಿಯನ್ನು ವಶಕ್ಕೆ ಪಡೆದರು. ಬಳಿಕ ಪರಿಶೀಲನೆ ನಡೆಸಿದಾಗ ಸ್ಕೂಟರ್ನ ಢಿಕ್ಕಿಯಲ್ಲಿ ಎಂಡಿಎಂಎ ಪತ್ತೆಯಾಗಿದೆ.
ಆರೋಪಿಯಿಂದ 35,000ರೂ. ಮೌಲ್ಯದ 17.66 ಗ್ರಾಂ ತೂಕದ ಮಾದಕ ವಸ್ತುಗಳು, ತೂಕದ ಯಂತ್ರ, 2.18 ಗ್ರಾಂ ತೂಕದ ಬಿಳಿ ಬಣ್ಣದ ಮಾತ್ರೆ ಮತ್ತು ಪೌಡರ್, ಸ್ಕೂಟರ್, ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 85 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತನ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಮೂರು, ಕಾಪು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ. ಈತ ಸೆ.24ರಂದು ಹಿರಿಯಡ್ಕ ಜೈಲ್ನಿಂದ ಬಿಡುಗಡೆಯಾಗಿದ್ದು, ರೂಡಿಗತ ಆರೋಪಿಯಾಗಿದ್ದಾನೆ.
ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ನೇತೃತ್ವದಲ್ಲಿ ಉಡುಪಿ ನಗರ ಠಾಣಾ ಎಸ್ಸೈಗಳಾದ ಭರತೇಶ್ ಕಂಕಣವಾಡಿ, ರತ್ನಾಕರ್ ಕೆ., ಸಿಬ್ಬಂದಿ ಜೀವನ್ ಕುಮಾರ್, ಆನಂದ ಗಾಣಿಗ, ಪ್ರಸನ್ನ ಸಿ., ಹೇಮಂತ್, ಓಬಳೇಶ ಆನಂದಯ್ಯ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.






