ಉಡುಪಿ | ಮಾನವಹಕ್ಕುಗಳ ಅರಿವು ಅತಿ ಅಗತ್ಯ : ಪ್ರಶಾಂತ್ ನೀಲಾವರ

ಉಡುಪಿ, ಡಿ.12: ಮಾನವ ಹಕ್ಕುಗಳ ಹೋರಾಟಕ್ಕೆ ಒಂದು ಇತಿಹಾಸವಿದೆ. ಜಗತ್ತಿನ ಪ್ರತಿಯೊಬ್ಬ ಮನುಷ್ಯನಿಗೆ ಗೌರವಯುತವಾಗಿ ಬದುಕುವ ಹಕ್ಕು ಇದೆ. ಇದನ್ನೇ ನಮ್ಮ ಸಂವಿಧಾನದ ತತ್ವಗಳು ಪ್ರತಿಪಾದಿಸುತ್ತದೆ. ಈ ದೃಷ್ಟಿಯಿಂದ ಮಾನವಹಕ್ಕುಗಳ ಕುರಿತಾಗಿ ಅರಿವು ಮೂಡಿಸುವುದು ಅತಿ ಅಗತ್ಯ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ನೀಲಾವರ ಹೇಳಿದ್ದಾರೆ.
ಭಾರತೀಯ ರೆಡ್ ಕ್ರಾಸ್ ವತಿಯಿಂದ ವಿಶ್ವ ಮಾನವ ಹಕ್ಕು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ರೆಡ್ ಕ್ರಾಸ್ ಸಭಾಪತಿಗಳಾದ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಚಟುವಟಿಕೆಗಳು ಮಾನವ ಹಕ್ಕುಗಳ ಹೋರಾಟದ ಒಂದು ಭಾಗ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಗೋಪಾಲಕೃಷ್ಣ ಎಂ.ಗಾಂವ್ಕರ್ ವಹಿಸಿದ್ದರು. ರೆಡ್ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಟಿ.ಚಂದ್ರಶೇಖರ್, ಐಕ್ಯುಎಸಿ ಸಂಚಾಲಕಿ ರೋಶನಿ ಯಶವಂತ್, ರೆಡ್ ಕ್ರಾಸ್ ಸಂಚಾಲಕ ಡಾ.ರಾಘವ ನಾಯಕ್ ಉಪಸ್ಥಿತರಿದ್ದರು.
ರೆಡ್ ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಪ್ರಾಸ್ತಾವಿಕವಾಗಿ ಮಾತಾನಾಡಿದರು. ಅಕ್ಷತಾ ಸ್ವಾಗತಿಸಿದರು. ಶಪಾ ವಂದಿಸಿದರು. ಮನೀಷ ಕಾರ್ಯಕ್ರಮ ನಿರೂಪಿಸಿದರು.







